ಮದುವೆಗೆ ಸಾಲ ಕೊಡುವುದಾಗಿ ಯುವತಿಯನ್ನು ಫ್ಲ್ಯಾಟ್‌ಗೆ ಕರೆದೊಯ್ದು ಮದ್ಯ ಕುಡಿಸಿ ಆಕೆಯ ಮೇಲೆ ಬಿಜೆಪಿ ಮುಖಂಡ ಅತ್ಯಾಚಾರವೆಸಗಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
26 ವರ್ಷದ ಯುವತಿ ನೀಡಿದ ದೂರಿನ ಆಧಾರದ ಮೇಲೆ ಬಿಜೆಪಿ ಮುಖಂಡ ಜಿಮ್ ಸೋಮ ಅಲಿಯಾಸ್ ಸೋಮಶೇಖರ್ ಮೇಲೆ ಅಶೋಕನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಸಂತ್ರಸ್ತ ಯುವತಿಗೆ ಆಕೆಯ ಸ್ನೇಹಿತೆ ಮೂಲಕ ಸೋಮಶೇಖರ್ ಪರಿಚಯವಾಗಿತ್ತು. ಯುವತಿ ಮದುವೆಗಾಗಿ ಸೋಮಶೇಖರ್ ಬಳಿ ಸುಮಾರು 6 ಲಕ್ಷ ಹಣದ ಸಹಾಯ ಕೇಳಿದ್ದರು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಹಣ ಕೊಡುವುದಾಗಿ ಸಂತ್ರಸ್ತೆಯನ್ನು ಪಿಜಿಯಿಂದ ಲ್ಯಾಂಗ್ ಫೋರ್ಡ್ ರಸ್ತೆಯ ತನ್ನ ಫ್ಲಾಟ್‌ಗೆ ಕರೆದೊಯ್ದು ಇಚ್ಚೆಗೆ ವಿರುದ್ಧವಾಗಿ ಮದ್ಯಕುಡಿಸಿ ಅತ್ಯಾಚಾರವೆಸಗಿದ್ದಾನೆ. ಈ ವಿಚಾರ ಹೊರಗಡೆ ಹೇಳಿದರೆ ಪ್ರಾಣ ತೆಗೆಯೋದಾಗಿ ಬೆದರಿಕೆ ಹಾಕಿದ್ದು, ಮಾನ ಹರಾಜು ಹಾಕುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ದೂರು ನೀಡಿದ್ದಾಳೆ.
ಜಿಮ್ ಸೋಮ ಒಂದು ಕಾಲದಲ್ಲಿ ರೌಡಿ ಶೀಟರ್ ಆಗಿದ್ದ. ಬೆಂಗಳೂರಿನಲ್ಲಿ ಸಾಕಷ್ಟು ವ್ಯವಹಾರ ಮಾಡಿ ಕೋಟಿ ಕೋಟಿ ಹಣ ಗಳಿಸಿಕೊಂಡ ಸೋಮ 2018 ರ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಸಲುವಾಗಿ ಹಾಸನ ಜಿಲ್ಲೆಯ ಎಸ್ಸಿ ಮೀಸಲು ಕ್ಷೇತ್ರ ಆಲೂರು ಸಕಲೇಶಪುರ ವಿಧಾನಸಭಾ ಕ್ಷೇತ್ರ ಕ್ಕೆ 2017 ರಲ್ಲಿಯೇ ಎಂಟ್ರಿ ಆಗಿದ್ದರು. ತಮ್ಮದೇ ತಂಡ ಕಟ್ಟಿಕೊಂಡು ಕ್ಷೇತ್ರದಲ್ಲಿ ಓಡಾಡುತ್ತಾ ಬಿಎಸ್ ಯಡಿಯೂರಪ್ಪ ಅವರ ವಿಶ್ವಾಸ ಗಳಿಸಿದ್ದರು. ಟಿಕೇಟ್ ಹಂಚಿಕೆ ಸಂದರ್ಭ ಬಂದಾಗ ಸ್ಥಳೀಯ ವಾಗಿ ಸಾಕಷ್ಟು ವಿರೋಧದ ನಡುವೆ ಕೂಡ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಂಡು ಸ್ಪರ್ದೆ ಮಾಡಿದ್ದರು. ಕೇವಲ ಐದು ಸಾವಿರ ಮತಗಳ ಅಂತರದಿಂದ ಪರಾಭವ ಗೊಂಡ ಸೋಮಶೇಖರ್ ಕ್ಷೇತ್ರದಿಂದ ಕಣ್ಮರೆ ಆಗಿದ್ದರು.
ಬಳಿಕ 2019 ರ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದಲ್ಲಿ ಟಿಕೇಟ್ ಪಡೆಯುವ ಸಲುವಾಗಿ ಅಲ್ಲಿ ಓಡಾಟ ಶುರು ಮಾಡಿದ್ದರು. ಆದರೆ ಟಿಕೇಟ್ ಸಿಗದಿದ್ದಾಗ ರಾಜಕೀಯ ದಿಂದ ಅಂತರ ಕಾಯ್ದುಕೊಂಡಿದ್ದರು. ಮತ್ತೆ 2023 ರ ವಿಧಾನಸಭಾ ಚುನಾವಣೆ ಸಮಯದಲ್ಲಿ ಸಕಲೇಶಪುರದಲ್ಲಿ ಮತ್ತೆ ಕಾಣಿಸಿಕೊಂಡಿದ್ದರು. ಬಿಜೆಪಿಯಿಂದ ಟಿಕೆಟ್ ಪಡೆಯಲು ಸಾಕಷ್ಟು ಯತ್ನ ನಡೆಸಿದ್ದರು. ಆದರೆ ಬಿಜೆಪಿ ಟಿಕೆಟ್ ಸಿಮೆಂಟ್ ಮಂಜುಗೆ ಸಿಕ್ಕಾಗ ಬಿಜೆಪಿ ತೊರೆದು ಜೆಡಿಎಸ್ ಸೇರಿದ್ದರು. ಆ ಬಳಿಕ ಜೆಡಿಎಸ್ ಜೊತೆಯಾಗಲಿ, ಬಿಜೆಪಿಯ ಕಾರ್ಯಕ್ರಮ ಗಳಲ್ಲಿಯಾಗಲಿ ಕಾಣಿಸಿಕೊಂಡಿಲ್ಲ.
