
ಮಂಗಳೂರು : ಪ್ರವೀಣ್ ನೆಟ್ಟಾರು ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದು, ಪ್ರಕರಣದಲ್ಲಿ ಬಂಧಿತರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ.
ಬಂಧಿತನನ್ನು ಅತೀಕ್ ಅಹಮದ್ ಎಂದು ಗುರುತಿಸಲಾಗಿದೆ. ಈ ಪ್ರಕರಣದಲ್ಲಿ ಬಂಧನಕ್ಕೊಳಗಾದ 21ನೇ ಆರೋಪಿ ಈತ ಎಂದು ಎನ್‌ಐಎ ತಿಳಿಸಿದೆ.
ಅತೀಕ್ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯ ಸದಸ್ಯ. ಜನರಲ್ಲಿ ಕೋಮುದ್ವೇಷ ಸೃಷ್ಟಿಸುವ ಪಿಎಫ್‌ಐ ಕಾರ್ಯಸೂಚಿಯಂತೆ ಈ ಹತ್ಯೆಗೆ ಸಂಚು ರೂಪಿಸಿದ್ದ ಮುಖ್ಯ ಆರೋಪಿ ಮುಸ್ತಾಫ ಪೈಚಾರ್‌ಗೆ ಅತೀಕ್ ಆಶ್ರಯ ನೀಡಿದ್ದ. ಕೃತ್ಯ ನಡೆಸಿದ ಬಳಿ ಮುಸ್ತಾಫ ಚೆನ್ನೈ ತಲುಪುವುದಕ್ಕೆ ನೆರವಾಗಿದ್ದ.
2024ರಲ್ಲಿ ಮುಸ್ತಾಫನ ಬಂಧನ ಆಗುವವರೆಗೂ, ಆತ ತಲೆ ಮರೆಸಿಕೊಳ್ಳುವುದಕ್ಕೆ ಸಹಾಯ ಮಾಡಿದ್ದ’ ಎಂದು ಎನ್‌ಐಎ ತಿಳಿಸಿದೆ. ಬೆಳ್ಳಾರೆಯಲ್ಲಿ 2022ರ ಜುಲೈನಲ್ಲಿ ಪ್ರವೀಣ್ ನೆಟ್ಟಾರು ಹತ್ಯೆ ನಡೆದಿತ್ತು. ಈ ಪ್ರಕರಣದ ತನಿಖೆಯನ್ನು 2022ರ ಆಗಸ್ಟ್‌ನಲ್ಲಿ ಎನ್‌ಐಎಗೆ ಹಸ್ತಾಂತರಿಸಲಾಗಿತ್ತು. ಈ ಪ್ರಕರಣದಲ್ಲಿ ಇನ್ನೂ ಆರು ಆರೋಪಿಗಳ ಬಂಧನವಾಗಬೇಕಿದೆ.
ಬಿಜೆಪಿ ಯುವ ಮೋರ್ಚಾದ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರ ಮೇಲೆ ಜುಲೈ 26, 2022 ರಂದು ರಾತ್ರಿ ಬೆಳ್ಳಾರೆಯಲ್ಲಿರುವ ಅವರ ಕೋಳಿ ಅಂಗಡಿಯ ಬಳಿ ಹಲ್ಲೆ ನಡೆಸಲಾಗಿತ್ತು. ಅತೀಕ್ ಅಹ್ಮದ್ ಬಂಧನದೊಂದಿಗೆ ಆರೋಪಪಟ್ಟಿಯಲ್ಲಿ ಹೆಸರಿಸಲಾದ 26 ಆರೋಪಿಗಳ ಪೈಕಿ ಬಂಧಿತರ ಸಂಖ್ಯೆ 21ಕ್ಕೆ ಏರಿದೆ. ಉಳಿದ ಆರೋಪಿಗಳನ್ನು ಬಂಧಿಸಲು ಮತ್ತು ವಿಶಾಲವಾದ ಪಿತೂರಿಯನ್ನು ಬಿಚ್ಚಿಡಲು NIA ತನ್ನ ತನಿಖೆಯನ್ನು ಮುಂದುವರೆಸಿದೆ.