ಮಂಗಳೂರು: ಆನ್‌ಲೈನ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಸಿಇಎನ್ ಕ್ರೈಂ ಪೊಲೀಸ್ ಠಾಣೆಯ ಅಧಿಕಾರಿ ಗಳು ಕೇರಳ ಮೂಲದ ಜುನೈದ ಎ.ಕೆ. ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಅಪಚಿರಿತ ವ್ಯಕ್ತಿಯೊಬ್ಬ ವಾಟ್ಸ್‌ಆ್ಯಪ್‌ನಲ್ಲಿ ಶೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರೆ ಹೆಚ್ಚಿನ ಲಾಭಾಂಶ ಸಿಗಬಹುದು ಎಂಬ ಸಂದೇಶ ಕಳುಹಿಸಿದ್ದ. ಅದನ್ನು ನಂಬಿದ ದೂರುದಾರರು ಹಂತ ಹಂತವಾಗಿ 46 ಲಕ್ಷ ರೂ.ವನ್ನು ಪಾವತಿಸಿದ್ದರು.
ತನಿಖೆ ಆರಂಭಿಸಿದ ಪೊಲೀಸರು ಹಣ ವರ್ಗಾವಣೆಯಾಗಿದ್ದ ಬ್ಯಾಂಕ್ ಖಾತೆದಾರರ ವಿವರವನ್ನು ಸಂಗ್ರಹಿಸಿದಾಗ ಪಶ್ಚಿಮ ಬಂಗಾಳದ ಮೂಲದ ವ್ಯಕ್ತಿಗೆ 10 ಲಕ್ಷ ರೂ. ಮತ್ತು ಕೇರಳದ ಕಲ್ಲಿಕೋಟೆಯ ಆಯಿಶಾ ಹಾದಿಯಾಳ ಬ್ಯಾಂಕ್ ಖಾತೆಗೆ 5 ಲಕ್ಷ ರೂ. ಜಮೆಯಾಗಿರುವುದನ್ನು ಪತ್ತೆ ಹಚ್ಚಿದರು. ಅದರಂತೆ ಆಯಿಶಾ ಹಾದಿಯಾಳ ಗಂಡ ಜುನೈದ್ ಎ.ಕೆ. (32) ಹಣವನ್ನು ವಿಥ್‌ಡ್ರಾ ಮಾಡಿಸಿಕೊಂಡು ದುಬೈನಲ್ಲಿರುವ ಬಾಬು ಎಂಬಾತನ ನಿರ್ದೇಶನದಂತೆ ಮನೀಬ್ ಎಂಬಾತನಿಗೆ ನೀಡಿದ್ದ. ಪ್ರತಿಯಾಗಿ 5,000 ರೂ. ಕಮಿಷನ್ ಪಡೆದಿರುವುದನ್ನು ಪೊಲೀಸರು ಪತ್ತೆ ಹಚ್ಚಿದರು.
ಕಾರ್ಯಾಚರಣೆಯಲ್ಲಿ ಸೆನ್ ಠಾಣಾಧಿಕಾರಿ ಎಸಿಪಿ ರವೀಶ್ ನಾಯಕ, ನಿರೀಕ್ಷಕ ಸತೀಶ್ ಎಂ.ಪಿ ಮತ್ತು ಉಪ ನಿರೀಕ್ಷಕ ಮೋಹನ್ ಮತ್ತಿತರರು ಪಾಲ್ಗೊಂಡಿದ್ದರು.
