ಬೆಳ್ತಂಗಡಿ : ಸ್ನೇಹಿತನ ಮನೆಗೆ ಆಗಮಿಸಿದ್ದ ಮೂವರು ಯುವಕರು ನದಿ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ನ.27 ಬುಧವಾರ ಸಂಜೆ ನಡೆದಿದೆ.
ಮೃತ ಯುವಕರನ್ನು ಮೂಡುಬಿದಿರೆಯ ಎಡಪದವು ನಿವಾಸಿ ಲಾರೆನ್ಸ್(21), ಬೆಳ್ತಂಗಡಿ ತಾಲೂಕಿನ ಪಾರೆಂಕಿ ನಿವಾಸಿ ಸೂರಜ್ (19) ಹಾಗೂ ಬಂಟ್ವಾಳ ತಾಲೂಕಿನ ವಗ್ಗ ನಿವಾಸಿ ಜೈಸನ್ (19) ಎಂದು ಗುರುತಿಸಲಾಗಿದೆ.
ಮೂವರೂ ಯುವಕರು ಮಂಗಳೂರಿನ ಕಾಲೇಜೊಂದರ ನರ್ಸಿಂಗ್ ವಿದ್ಯಾರ್ಥಿಗಳು. ವೇಣೂರು ಚರ್ಚ್ ನ ಕಾರ್ಯಕ್ರಮದ ಹಿನ್ನಲೆಯಲ್ಲಿ ಗೆಳೆಯನ ಮನೆಗೆ ಬಂದಿದ್ದರು. ಮಧ್ಯಾಹ್ನ ಊಟ ಮುಗಿಸಿ ಮೂಡುಕೋಡಿ ಗ್ರಾಮದ ಬರ್ಕಜೆ ಡ್ಯಾಂ ಬಳಿ ಸ್ನಾನ ಮಾಡಲು ಮೂವರು ಹೋಗಿದ್ದು ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಮೂವರು ಯುವಕರು ನೀರುಪಾಲಾಗಿದ್ದಾರೆ.
ಮೂವರ ಮೃತದೇಹಗಳನ್ನು ನೀರಿನಿಂದ ಹೊರತೆಗೆಯಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು, ಅಗ್ನಿ ಶಾಮಕದಳದವರು ತೆರಳಿದ್ದು, ಸ್ಥಳೀಯರ ಸಹಕಾರದೊಂದಿಗೆ ಮೃತದೇಹಗಳನ್ನು ಮೇಲೆತ್ತಲಾಗಿದೆ. ವೇಣೂರು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.