ಮಂಗಳೂರಿನಲ್ಲಿ ಸರ್ಕಾರಿ ಸ್ವಾಮ್ಯದ ಕಂಪೆನಿಯೊಂದು ತುಳುನಾಡಿನ ದೈವಾರಾಧನೆಗೆ ತಡೆಯೊಡ್ಡುವ ಮೂಲಕ ಭಾರೀ ವಿವಾದ ಸೃಷ್ಟಿಸಿದೆ. ಮಂಗಳೂರಿನಲ್ಲಿ ಮಂಗಳೂರು ವಿಶೇಷ ಆರ್ಥಿಕ ವಲಯದ ನಡೆ ಸದ್ಯ ಭಾರೀ ವಿವಾದ ಸೃಷ್ಟಿಸಿದೆ.
ದೈವಾರಾಧನೆ ವಿಚಾರಕ್ಕೆ ಇದೀಗ ಎಂಎಸ್ ಇಝೆಡ್ ಮತ್ತೆ ಸುದ್ದಿಯಲ್ಲಿದೆ. ಬಜಪೆ ಗ್ರಾಮದ ನೆಲ್ಲಿದಡಿಗುತ್ತಿನ ದೈವ ಕಾಂತೇರಿ ಜುಮಾದಿ ಸ್ಥಾನಕ್ಕೆ ತೆರಳಿ ನಿತ್ಯ ಆರಾಧನೆಗೆ ಮುಂದಿನ ದಿನಗಳಿಂದ ಅವಕಾಶವನ್ನು ನಿರಾಕರಿಸುವ ಮೂಲಕ ಮಂಗಳೂರು ಎಸ್‌ಇಝೆಡ್ ಕಂಪನಿ ತುಳುನಾಡಿನ ಆಸ್ಮಿತೆ, ನಂಬಿಕೆ ಮೇಲೆ ಸವಾರಿ ಮಾಡಲು ಹೊರಟಿದೆ.
ಎಂಎಸ್ಇಝಡ್ ವ್ಯಾಪ್ತಿಯಲ್ಲಿರೋ ಕಾಂತೇರಿ ಜುಮಾದಿ ದೇವಸ್ಥಾನದ ಆಚರಣೆಗೆ ಎಂಎಸ್ಇಝಡ್ ಅಧಿಕಾರಿಗಳು ತಡೆ ಒಡ್ಡಿದ ಆರೋಪ ಕೇಳಿ ಬಂದಿದೆ. ಮಂಗಳೂರು ಹೊರವಲಯದ ಬಜಪೆ ಗ್ರಾಮದ ನೆಲ್ಲಿದಡಿ ಗುತ್ತುವಿನ ಕಾಂತೇರಿ ಜುಮಾದಿ ದೈವಸ್ಥಾನಕ್ಕೆ 800 ವರ್ಷಗಳ ಇತಿಹಾಸವಿದೆ. 2006ರಲ್ಲಿ ಕೈಗಾರಿಕಾ ಪ್ರದೇಶಕ್ಕಾಗಿ ಸಾವಿರಾರು ಎಕರೆ ಜನವಸತಿ ಜಾಗ ಸರ್ಕಾರದಿಂದ ಭೂ ಸ್ವಾಧೀನವಾಗಿತ್ತು.
ಬಜ್ಪೆ, ಬಾಳ, ಕುತ್ತೆತ್ತೂರು, ಪೆರ್ಮುದೆ ಕಳವಾರು ಗ್ರಾಮದ ಸಾವಿರಾರು ಎಕರೆ ಭೂ ಸ್ವಾಧೀನವಾಗಿತ್ತು. ಸಮೃದ್ಧ ಗದ್ದೆಗಳು, ಸಾವಿರಾರು ನಾಗಬನಗಳು, ಬ್ರಹ್ಮಸ್ಥಾನಗಳು, ದೈವದ ಗುಡಿಗಳು, ಕೆರೆ, ತೊರೆ, ಶಾಲೆ, ಚರ್ಚು, ಮಸೀದಿ ಸಾವಿರಾರು ಮನೆಗಳು ಭೂ ಸ್ವಾಧೀನಕ್ಕೆ ನೆಲಸಮವಾಗಿತ್ತು. ಆದರೆ 800 ವರ್ಷಗಳ ಇತಿಹಾಸವಿದ್ದ ನೆಲ್ಲಿದಡಿ ಗುತ್ತಿನ ದೇವಸ್ಥಾನ ಮುಟ್ಟಲಾಗಲಿಲ್ಲ.
ನೆಲ್ಲಿದಡಿ ಗುತ್ತಿನ ಪೂರ್ತಿ ಜಾಗವನ್ನು ಕಂಪನಿ ಬಲಾತ್ಕಾರದಿಂದ ತನ್ನ ಹೆಸರಿಗೆ ಬರೆಸಿಕೊಂಡರೂ ದೈವಸ್ಥಾನ ಮಟ್ಟಲಾಗಲಿಲ್ಲ. ಯಾವ ಕಾರಣಕ್ಕೂ ನಾನು ಈ ಮಣ್ಣನ್ನು ಬಿಡುವುದಿಲ್ಲ ಎಂದು ದೈವ ನುಡಿದ ಕಾರಣ ಸಾವಿರಾರು ಎಕರೆ ಕೈಗಾರಿಕಾ ಪ್ರದೇಶದಲ್ಲಿ ಏಕಾಂಗಿಯಾಗಿ ಕಾಂತೇರಿ ಜುಮಾದಿ ದೈವದ ದೈವಸ್ಥಾನ ಈಗಲೂ ಇದೆ. 2016ರಲ್ಲಿ ಕಂಪನಿ ಮತ್ತೊಮ್ಮೆ ನೆಲ್ಲಿದಡಿ ಗುತ್ತನ್ನು ನೆಲಸಮ ಮಾಡಲು ಯತ್ನಿಸಿದರೂ ಆಗಲಿಲ್ಲ. ಕೊನೆಗೆ ಅಂದಿನ ಜಿಲ್ಲಾಧಿಕಾರಿ ದೈವಸ್ಥಾನವನ್ನು ಒಂದು ಸ್ಮಾರಕದ ಹಾಗೆ ಉಳಿಸಿಕೊಳ್ಳುವ ಭರವಸೆ ನೀಡಿದ್ದರು.
ಮಂಗಳೂರು ಎಸ್‌ಇಝೆಡ್ ಕಂಪನಿಯು ಭೂ ಸ್ವಾಧೀನದ ವೇಳೆ ನೆಲ್ಲಿದಡಿ ಗುತ್ತಿನ 22 ಮನೆಗಳ ಸ್ಥಳಾಂತರ ಮಾಡಲು ಮನವೊಲಿಸುವ ಸಭೆಯಲ್ಲಿ ದೈವಕ್ಕೆ ನಿತ್ಯ ಹೂ ನೀರು, ಸಂಕ್ರಮಣ, ದೀಪಾವಳಿ, ಚೌತಿ, ಅಷ್ಟಮಿ, ಮಾರಿ ಉತ್ಸವ, ಬಂಡಿ ಉತ್ಸವ, ಚಾವಡಿ ನೇಮ, ಕುಟುಂಬದಲ್ಲೆ ಮೃತಪಟ್ಟರೆ ಅದರ ಕಾರ್ಯಕ್ರಮ ಹೀಗೆ ಹತ್ತು ಹಲವು ಕೆಲಸಗಳನ್ನು ಮಾಡಲು ಅವಕಾಶ ನೀಡುವುದಾಗಿ ಭರವಸೆ ನೀಡಲಾಗಿತ್ತು. 2016ರ ಡಿಸೆಂಬರ್‌ನಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲೂ ಇದೇ ತೀರ್ಮಾನಕ್ಕೆ ಬರಲಾಗಿತ್ತು.
ಅದರಂತೆ ನೆಲ್ಲಿದಡಿಗುತ್ತು ಹಾಗೂ ಊರಿನವರು ಎಂಎಸ್‌ಇಝೆಡ್ ಅಧಿಕಾರಿಗಳಿಗೆ ಮಾಹಿತಿ ನೀಡಿ, ದೈವಸ್ಥಾನಕ್ಕೆ ತೆರಳಿ ಸೇವಾ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದರು. ಆದರೆ ಫೆ.12ರಂದು ಸಂಕ್ರಮಣ ಸೇವೆ ಮಾಡಲು ತೆರಳಲು ಮನವಿ ಪತ್ರ ನೀಡುವ ವೇಳೆ ಇದು ಕೊನೆಯ ಅವಕಾಶವಾಗಿದ್ದು, ಮುಂದಿನ ದಿನಗಳಿಂದ ಆರಾಧನೆಗೆ ಅವಕಾಶ ಇರುವುದಿಲ್ಲ ಎಂದು ಎಂಎಸ್‌ಇಝೆಡ್ ಕಂಪನಿ ಅಧಿಕಾರಿಗಳು ಹೇಳಿದ್ದಾರೆ.
ಬೇಡಿಕೆ: 800 ವರ್ಷಗಳ ಇತಿಹಾಸವಿರುವ ನೆಲ್ಲಿದಡಿ ಗುತ್ತು ಮತ್ತು ಕಾಂತೇರಿ ಜಮಾದಿ ದೈವಸ್ಥಾನದ ಜಾಗವನ್ನು ದೈವದ ಹೆಸರಿಗೆ ನೋಂದಣಿ ಮಾಡಬೇಕು.
ಈ ದೈವಸ್ಥಾನಕ್ಕೆ ಒಂದು ಪ್ರತ್ಯೇಕವಾದ ರಸ್ತೆಯ ಸಂಪರ್ಕವನ್ನು ವಿಶೇಷ ಆರ್ಥಿಕ ವಲಯದ ಅಧಿಕಾರಿಗಳು ಮಾಡಿಕೊಡಬೇಕು.
ತುಳುನಾಡಿನ ಅತ್ಯಂತ ಪ್ರಸಿದ್ಧ ದೈವಸ್ಥಾನದಲ್ಲಿ ದೈವಕ್ಕೆ ಹೂವು ನೀರು ಇಡಲು ನಿರ್ಬಂಧ ಹೇರಲಾಗಿದೆ. ಸದ್ಯ ಕಂಪೆನಿ ಅಧಿಕಾರಿಗಳ ನಡೆಯ ವಿರುದ್ದ ಸಾಮಾಜಿಕ ತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ನೆಲ್ಲಿದಡಿ ಗುತ್ತು ಉಳಿಸಿ ಹೆಸರಿನಲ್ಲಿ ಭಾರೀ ಅಭಿಯಾನ ಆರಂಭವಾಗಿದೆ. ಇಷ್ಟೋಂದು ದೊಡ್ಡ ಮಟ್ಟಿನ ಅನ್ಯಾಯ ನಡೆದರು ಇದರ ವಿರುದ್ಧ ಯಾವುದೇ ರಾಜಕೀಯ ನಾಯಕರು ಧ್ವನಿ ಎತ್ತದೆ ಇರುವುದು ವಿಷಾದನೀಯ. ತುಳುನಾಡಿನ ಪವಿತ್ರ ಆಚರಣೆ, ನಂಬಿಕೆ ಉಳಿಸಲು ಜನರೇ ಹೊರಡು ಅಗತ್ಯತೆ ಎದುರಾಗಿದೆ.
ನೆಲ್ಲಿದಡಿ ಗುತ್ತಿನ ಇತಿಹಾಸವೇನು.?? ಇತಂಹ ಪರಿಸ್ಥಿತಿಗೆ ಕಾರಣವೇನು,??
ಮೂರು ಬೆಳೆ ಬೆಳೆಯುತ್ತಿದ್ದ ಸಮೃದ್ಧ ಗದ್ದೆ ಸಾಲು ಕಟ್ಟಪುಣಿಯಲ್ಲಿ ರಾರಾಜಿಸುತ್ತಿದ್ದ ತೆಂಗುಕಂಗು ಪಚ್ಚೆಪೈರು ಪಲ್ಗುಣಿಯ ಅಮೃತ ಧಾರೆಯನ್ನು ಎಲ್ಲೆಮೂಲೆಗಳಿಗೆ ಹೊತ್ತು ಹರಿಸುವ ನೀರ ತೊರೆಗಳು ಬಗೆ ಬಗೆಯ ಜೀವ ವೈವಿಧ್ಯ. ಆ ಸ್ವರ್ಗ ಸದೃಶ ಪ್ರಕೃತಿಯ ನಡುವೆ ಸಿಂಹ ಗಾಂಭಿರ್ಯದಿಂದ ಕಂಗೊಳಿಸುತ್ತಿದ್ದ ನೆಲ್ಲಿದಡಿಗುತ್ತು.
ಆ ಭೂಮಿಯ ಬುಲೆಸೆಲೆ, ಐಸಿರಿ, ಭೂಮಿ ಬಾರಗರ ಸತ್ಯ ಧರ್ಮ ನ್ಯಾಯ ಪರಿಪಾಲನೆ ಕಂಡು ಪಾರಲೆ ಗುತ್ತಿನ ದೈವ ಕಾಂತೇರಿ ಜುಮಾದಿ ಒಂದು ಕೋಣ ಕಟ್ಟುವ ಹಗ್ಗದ ನೆಪ ಹೇಳಿಕೊಂಡು ನೆಲ್ಲಿದಡಿ ಗುತ್ತಿನ ಚಾವಡಿಗೆ ಕಾಲಿಟ್ಟ. ಮುಂದೆ ನೆಲ್ಲಿದಡಿ ಗುತ್ತು ವೈಭವದ ಶಿಖರ ಚುಂಭಿಸಿತು.
ಆ ಕಾಲಕ್ಕೆ ಸರ್ಪದ ವಿಷಕ್ಕೆ ಮದ್ದು ಕೊಟ್ಟು ವಿಷ ವೈದ್ಯರಾಗಿ ಪ್ರಖ್ಯಾತಿ ಪಡೆದಿದ್ದ ಸೂರಿಂಜೆ ಗುತ್ತಿನ ತ್ಯಾಂಪ ಶೆಟ್ಯಾಲ್ ತನ್ನ ಅಂತ್ಯಕಾಲದಲ್ಲಿ ಸಮಷ್ಟಿಯ ಹಿತಕ್ಕಾಗಿ ಒಂದು ಮಹತ್ ಕಾರ್ಯ ನಡೆಸಿದರು. ಅವರ ಬಳಿ ಸಾವಿರಾರು ಜನರ ಜೀವ ಉಳಿಸಿದ ವಿಷ ಹೀರುವ ಕಲ್ಲುಗಳಿದ್ದವು ಅದರಲ್ಲಿ ಒಂದನ್ನು ಶಿಬರೂರು ಕೊಡಮಣಿತ್ತಾಯ ದೈವದ ಬಾವಿಗೆ ಹಾಕಿದರು. ಇನ್ನೊಂದನ್ನು ಮಂತ್ರಿಸಿ ನೆಲ್ಲಿದಡಿ ಗುತ್ತಿನ ಮುಂಭಾಗದಲ್ಲಿರುವ ಸ್ಪಟಿಕ ಶುದ್ಧ ಬಾವಿಗೆ ಹಾಕಿದರು.
ಅಂದಿನಿಂದ ಆ ಬಾವಿಯ ನೀರು ಪವಾಡ ಸೃಷ್ಟಿಸುತ್ತಲೇ ಇದೆ. ಹಾವು ಕಡಿತಕ್ಕೆ ಒಳಗಾಗಿ ಜೀವನ್ಮರಣ ಹೋರಾಟ ಮಾಡುತ್ತಿದ್ದವರನ್ನೆಲ್ಲ ಹೊತ್ತು ತಂದರೆ, ಈ ಬಾವಿಯ ತೀರ್ಥ ಮತ್ತು ನೆಲ್ಲಿದಡಿ ಗುತ್ತಿನ ಒಂದು ಚಿಟಿಕೆ ಮಣ್ಣನ್ನು ದೈವ ಜುಮಾದಿಯ ಹೆಸರು ಹೇಳಿ ಕೊಟ್ಟರೆ ಸಾಕು ವಿಜ್ಞಾನ ಲೋಕಕ್ಕೆ ಸವಾಲೋ ಎಂಬಂತೆ ಜೀವವನ್ನು ಉಳಿಸಿಕೊಡುತ್ತಿದ್ದ ಜುಮಾದಿ! ಈ ಕೌತುಕಕ್ಕೆ ಸಾಕ್ಷಿಯಾದ ಅನೇಕರು ಇಂದಿಗೂ ಜೀವಂತವಿದ್ದಾರೆ. ನೆಲ್ಲಿದಡಿಗುತ್ತಿನ ದೈವ ಕಾಂತೇರಿ ಬಜ್ಪೆ ಗ್ರಾಮಕ್ಕೆ ಅಧಿದೈವ. ಇಲ್ಲಿ ಕಾಂತೇರಿ ಜುಮಾದಿಯ ಗಡಿ ಹಿಡಿದವರಿಗೆ ಗ್ರಾಮದಲ್ಲಿ ವಿಶೇಷ ಗೌರವವಿದೆ.
ಎಲ್ಲವೂ ಚೆನ್ನಾಗಿದೆ ಎನ್ನುವಾಗಲೇ ಅದೊಂದು ದಿನ ಸರಕಾರ ಜಾರಿ ಮಾಡಿದ ನೋಟಿಸು,ಬಜ್ಪೆ,ಬಾಳ ಕುತ್ತೆತ್ತೂರು ಪೆರ್ಮುದೆ ಕಳವಾರು ಮುಂತಾದ ಅನೇಕ ಊರಿನ ಜನರಿಗೆ ಸಾವಿರ ಸಿಡಿಲು ಏಕಕಾಲಕ್ಕೆ ತಲೆಗೆ ಬಡಿದ ಆಘಾತ ನೀಡಿತು. ಆ ನೋಟಿಸು ಜಾರಿಯಾಗಿದ್ದು 2006ರಲ್ಲಿ. ಅದನ್ನು ಕಂಡ ಜನರಿಗೆ ಕಾಲಡಿಯ ನೆಲವೇ ಸರಿದು ಹೋದ ಅನುಭವವಾಯಿತು.
ಸರಕಾರ ಆ ರೈತಾಪಿ ಜನರ ಭೂಮಿ ಗದ್ದೆ ತೋಟ ಎಲ್ಲವನ್ನೂ ಕೂಡ ಸಮತಟ್ಟು ಮಾಡಿ ಅಲ್ಲಿ ಕೈಗಾರಿಕೆಗಳಿಗೆ ಜಾಗ ಕೊಡಲು ಹೊರಟಿತ್ತು. ಮೂರು ಬೆಳೆ ಬೆಳೆಯುವ ಸಮೃದ್ಧ ಗದ್ದೆಗಳು , ಸಾವಿರಾರು ನಾಗಬನಗಳು, ಬ್ರಹ್ಮಸ್ಥಾನಗಳು, ದೈವದ ಗುಡಿಗಳು ಕೆರೆ ತೊರೆ ಶಾಲೆ ಚರ್ಚು ಮಸೀದಿ ಸಾವಿರಾರು ಮನೆಗಳು ಯಂತ್ರಗಳ ಪ್ರಹಾರಕ್ಕೆ ಸಿಲುಕಿ ನುಚ್ಚುನೂರಾಗಲು ಕ್ಷಣಗಣನೆ ಆರಂಭವಾಗಿತ್ತು.
ಜನರ ಭಾವನೆಗಳಿಗೆ ಬೆಲೆ ನೀಡಬೇಕಾಗಿದ್ದ ಅಧಿಕಾರಿಗಳು, ಆಳುವ ವರ್ಗದವರು ಜೆಸಿಬಿ ಯಂತ್ರಗಳಂತೆ ಸಂವೇದನಾ ಶೂನ್ಯರಾಗಿದ್ದರು. ಬೇರೆ ಉಪಾಯವಿಲ್ಲದೆ ಹೆಚ್ಚಿನ ಜನರೆಲ್ಲಾ ಕೈಗೆ ಸಿಕ್ಕಷ್ಟು ದುಡ್ಡು ಪಡೆದು ಊರು ಬಿಟ್ಟು ಗುಳೇ ಹೊರಟರು. ಊರುಗಳು ಅನಾಥವಾದವು. ಆ ಸತ್ತು ಹೋದ ಊರುಗಳಲ್ಲಿ ಸಾವಿರಾರು ಕಥೆಗಳಿವೆ. ಮತ್ತೇ ಕಟ್ಟಿ ಕೊಡಲಾಗದ ಆಳವಾದ ಸಂಬಂಧಗಳು ಒಂದೇ ಏಟಿಗೆ ಕಡಿದು ಹೋದವು. ಅವರು ಹುಟ್ಟಿ ಬೆಳೆದ ಆಡಿ ನಲಿದ ಮನೆ ಗದ್ದೆ ಗುಡ್ಡ ಬೈಲುಗಳಲ್ಲಿ ವಿಷ ಉಗುಳುವ ಕಾರ್ಖಾನೆಗಳು ತಲೆ ಎತ್ತಿದವು.ಯಾರೋ ಭಾಷೆ ಬಾರದ ಪರದೇಶಿಗಳು ಅಲ್ಲಿ ಬಂದು ಕೂತರು.
ಬಯಲು ಜೀವಿಗಳಾಗಿ ಸ್ವಚ್ಛಂಧವಾಗಿ ಬದುಕಿಕೊಂಡಿದ್ದ ಸಾವಿರಾರು ತುಳುವರು ಕಾಲನಿಗಳಲ್ಲಿ ನಿರಾಶ್ರಿತರಾಗಿ ಕಾಲ ಕಳೆಯುವಂತಾಯಿತು. ಆದರೆ ಈ ಎಲ್ಲಾ ಹತಾಶೆಯ ಕಾರ್ಮೋಡದ ನಡುವೆ ಬೆಳ್ಳಿ ಕಿರಣದಂತೆ ಗೋಚರಿಸಿದ್ದು ನೆಲ್ಲಿದಡಿ ಗುತ್ತು. ಆವತ್ತು ವಿನಾಶದ ಕರಿಚಾಯೆ 800 ವರ್ಷಗಳ ಇತಿಹಾಸವಿದ್ದ ನೆಲ್ಲಿದಡಿ ಗುತ್ತಿನ ಅಂಗಳಕ್ಕೂ ಆವರಿಸಿತ್ತು.
ಸೂರ್ಯ ಚಂದ್ರಕಾಲವರೆಗೆ ನೆಲ್ಲಿದಡಿಯ ಮಣ್ಣು ನನ್ನ ಅಧೀನ.. ಯಾವ ಕಾರಣಕ್ಕೂ ನಾನು ಈ ಮಣ್ಣನ್ನು ಬಿಡುವುದಿಲ್ಲ.. ನನ್ನ ಸಾನಿಧ್ಯವನ್ನು ಸ್ಥಳಾಂತರಿಸುವುದಾದರೆ ನನ್ನ ತೀರ್ಥದ ಬಾವಿಯನ್ನು ಕೂಡ ಸ್ಥಳಾಂತರಿಸಿ ಎಂದಿತ್ತು ದೈವ…!
ದೈವವೇ ಮಣ್ಣು ಬಿಟ್ಟು ಕದಲುವುದಿಲ್ಲ ಎಂದ ಮೇಲೆ ಕುಟುಂಬವಾದರೂ ದೈವವನ್ನು ಬಿಟ್ಟು ಹೋಗುವುದೆಲ್ಲಿಗೆ ? ನೆಲ್ಲಿದಡಿ ಗುತ್ತಿನ ಪ್ರತಿಯೊಬ್ಬ ಸದಸ್ಯರು ಅದೇ ಮಣ್ಣಿನಲ್ಲಿ ಗಟ್ಟಿಯಾಗಿ ನಿಲ್ಲುವ ಛಲವನ್ನು ತೊಟ್ಟರು. ನಾನಾ ರೀತಿಯ ಅಮಿಷ ಬೆದರಿಕೆಗಳು ಬಂದರೂ ಈ ಕುಟುಂಬ ಬಗ್ಗಲಿಲ್ಲ. ಬ್ಯಾಂಕು ಖಾತೆಗೆ ಬಂದು ಬಿದ್ದ ಕೋಟಿ ಕೋಟಿ ಹಣದ ಕಡೆಗೆ ತಲೆಯೆತ್ತಿಯೂ ನೋಡಲಿಲ್ಲ.
2016ರಲ್ಲಿ ಕಂಪನಿ ಮತ್ತೊಮ್ಮೆ ನೆಲ್ಲಿದಡಿ ಗುತ್ತನ್ನು ನೆಲಸಮ ಮಾಡಲು ಹವಣಿಸಿತು. ಆದರೆ ಕುಟುಂಬಿಕರು ಮತ್ತು ದೈವ ಪಟ್ಟು ಬಿಡಲಿಲ್ಲ. ಕೊನೆಗೆ ಅಂದಿನ ಜಿಲ್ಲಾಧಿಕಾರಿ ಈ 800 ವರ್ಷ ಇತಿಹಾಸವಿರುವ ದೈವಸ್ಥಾನವನ್ನು ಒಂದು ಸ್ಮಾರಕದ ಹಾಗೆ ಉಳಿಸಿಕೊಳ್ಳುತ್ತೇವೆ. ದೈವದ ನಿತ್ಯ ಪೂಜೆಗೆ ಒಂದಿಬ್ಬರಿಗೆ ಹೋಗಿ ಬರಲು ಅವಕಾಶ ನೀಡುತ್ತೇವೆ ಎಂದು ಮೌಖಿಕ ಅನುಮತಿ ನೀಡಿದ್ದರು. ಮುಗಿದೇ ಹೋಯಿತು ಎನ್ನುವ ನೆಲ್ಲಿದಡಿಗುತ್ತಿನ ಇತಿಹಾಸ ಕೂದಲೆಳೆಯಲ್ಲಿ ಉಳಿದುಕೊಂಡಿತು. ಸಾವಿರಾರು ಎಕರೆ ಕಂಪನಿಯ ಮಧ್ಯದಲ್ಲಿ ಇಂದಿಗೂ ದೈವ ಜುಮಾದಿಗೆ ನಿತ್ಯ ನಂದಾದೀಪ ಉರಿಯುತ್ತಿದೆ ವರ್ಷಕ್ಕೊಮ್ಮೆ ಗಗ್ಗರದ ಮಾರ್ದನಿ ಮೂಳಗುತ್ತದೆ.
ಶಿಥಿಲವಾಗಿದ್ದ ನೆಲ್ಲಿದಡಿ ಗುತ್ತನ್ನು ಈ ಕುಟುಂಬಕರು ಪುನರ್ ನಿರ್ಮಾಣ ಮಾಡಿದ್ದೆ ಒಂದು ರೋಚಕ ಸಾಹಸ. ಕಂಪನಿ ತನ್ನ ಗೇಟನ್ನು ದಾಟಿ ಒಂದು ಮೊಳೆ ಕೂಡ ಒಳಗೆ ತೆಗೆದುಕೊಂಡು ಹೋಗಲು ಬಿಡುವುದಿಲ್ಲ. ಆದರೂ ಈ ಇಡೀ ಮನೆ ಪುನರ್ ನಿರ್ಮಾಣವಾಗಿದೆ.
