Mangalore and Udupi news
ಅಪರಾಧಉಡುಪಿಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಉಡುಪಿ: ಎನ್​ಕೌಂಟರ್​ಗೆ ನಕ್ಸಲ್ ನಾಯಕ‌ ವಿಕ್ರಂ ಗೌಡ ಬಲಿ.!!

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹೆಬ್ರಿ ಕಬ್ವಿನಾಲೆಯ ಪೀತಬೈಲುವಿನಲ್ಲಿ ಸೋಮವಾರ ರಾತ್ರಿ ಎ ಎನ್ ಎಫ್ ಹಾಗೂ ನಕ್ಸಲರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ನಕ್ಸಲ್ ಮುಖಂಡ ವಿಕ್ರಂ ಗೌಡ ಬಲಿಯಾಗಿದ್ದಾನೆ.

ಹೆಬ್ರಿ ಪರಿಸರದಲ್ಲಿ ಕಳೆದ ಕೆಲದಿನಗಳಿಂದ ನಕ್ಸಲ್ ಓಡಾಟ ವರದಿಯಾಗಿದ್ದು, ಎಎನ್ ಎಫ್ ತೀವ್ರ ಕೂಂಬಿಂಗ್ ಕಾರ್ಯಾಚರಣೆ ನಡೆಸಿತ್ತು. ಸೋಮವಾರ ತಡ ಒಂದು ಗಂಟೆ ಸುಮಾರಿಗೆ 5 ಮಂದಿ ನಕ್ಸಲರ ತಂಡ ಪೀತ ಬೈಲು ಸಮೀಪ ರೇಷನ್ ಸಂಗ್ರಹಕ್ಕೆ ಬಂದಾಗ ಎಎನ್ ಎಫ್ ತಂಡ ಕಾರ್ಯಾಚರಣೆ ನಡೆಸಿದೆ.

ನಕ್ಸಲ್ ಎನ್​ಕೌಂಟರ್: ಕರ್ನಾಟಕ, ಕೇರಳ, ತಮಿಳುನಾಡು ಪೊಲೀಸರಿಗೆ ಬೇಕಾಗಿದ್ದ ವಿಕ್ರಂ ಗೌಡ ಹಿನ್ನೆಲೆ ಇಲ್ಲಿದೆ

ನಕ್ಸಲರ ನೇತ್ರಾವತಿ ದಳದ ನಾಯಕ ವಿಕ್ರಂ ಗೌಡ. ಹೆಬ್ರಿ ತಾಲೂಕಿನ ಕಬ್ಬಿನಾಲೆಯ ಪೀತೆಬೈಲ್ ಅರಣ್ಯ ಪ್ರದೇಶದ ಗ್ರಾಮದಲ್ಲಿ ನಡೆದ ಎನ್​ಕೌಂಟರ್​ನಲ್ಲಿ ಹತನಾಗಿದ್ದಾನೆ.

ಕಬ್ಬಿನಾಲೆ ಅರಣ್ಯದಲ್ಲಿ ನಡೆದ ಎನ್​ಕೌಂಟರ್​ನೊಂದಿಗೆ ಉಡುಪಿ ಭಾಗದಲ್ಲಿ 13 ವರ್ಷಗಳ ನಂತರ ಗುಂಡಿನ ಮೊರತೆ ಕೇಳಿದಂತಾಗಿದೆ. ಸೋಮವಾರ ರಾತ್ರಿ ಐದು ಮಂದಿ ಇದ್ದ ನಕ್ಸಲರ ತಂಡ ಗ್ರಾಮಕ್ಕೆ ದಿನಸಿ ಸಾಮಗ್ರಿ ಖರೀದಿಗೆಂದು ಬಂದಿದ್ದಾಗ ನಕ್ಸಲ್ ನಿಗ್ರಹ ಪಡೆ ಕಾರ್ಯಾಚರಣೆ ನಡೆಸಿದೆ. ಅಷ್ಟರಲ್ಲಿ ನಕ್ಸಲರು ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ನಡೆದ ಎನ್​ಕೌಂಟರ್​​ನಲ್ಲಿ ವಿಕ್ರಂ ಗೌಡ ಹತನಾದರೆ, ಉಳಿದ ನಕ್ಸಲರು ಪರಾರಿಯಾಗಿದ್ದಾರೆ.

ಇತ್ತೀಚೆಗೆ ಕೆಲವು ದಿನಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ, ಸುಳ್ಯ ಭಾಗದಲ್ಲಿ ಕೆಲವು ಗ್ರಾಮಗಳಿಗೆ ನಕ್ಸಲರು ಭೇಟಿ ನೀಡಿದ ಬಗ್ಗೆ ವರದಿಯಾಗಿತ್ತು. ಅದೇ ರೀತಿ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕೆಲವೆಡೆ ನಕ್ಸಲರು ಭೇಟಿ ನೀಡಿದ ಸುಳಿವು ದೊರೆತಿತ್ತು. ಕೊಪ್ಪ ತಾಲೂಕಿನ ಕಡೆಗುಂಡಿ ಗ್ರಾಮದ ಸುಬ್ಬೆಗೌಡ ಎಂಬವರ ಮನೆಯಲ್ಲಿ 3 ಬಂದೂಕುಗಳು ಪತ್ತೆಯಾಗಿದ್ದವು. ಆ ಮನೆಗೆ ನಕ್ಸಲ್ ನಾಯಕಿ ಮುಂಗಾರು ಲತಾ ಮತ್ತು ಆಕೆಯ ತಂಡ ಭೇಟಿ ನೀಡಿರುವ ಸುಳಿವು ಸಿಕ್ಕಿತ್ತು.

ನಂತರ ನಕ್ಸಲರ್ ನಿಗ್ರಹ ಪಡೆ ಕಾರ್ಯಾಚರಣೆ ತೀವ್ರಗೊಳಿಸಿದೆ.ಅರಣ್ಯ ಒತ್ತುವರಿ ತೆರವು, ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ನಕ್ಸಲರು ಕೊಪ್ಪ, ಶೃಂಗೇರಿ ತಾಲೂಕಿನಲ್ಲಿ ಸಭೆಗಳನ್ನು ನಡೆಸಿರುವ ಶಂಕೆ ವ್ಯಕ್ತವಾಗಿತ್ತು. ಇದೇ ಕಾರಣದಿಂದ ಮಲೆನಾಡು ಹಾಗೂ ಕರವಾಳಿ ಭಾಗದ ಪಶ್ಚಿಮ ಘಟ್ಟದ ಅಂಚಿನ ಗ್ರಾಮಗಳಲ್ಲಿ ನಕ್ಸಲ್ ಚಟುವಟಿಕೆ ಮತ್ತೆ ಹೆಚ್ಚಾಗುತ್ತಿರುವ ಅನುಮಾನ ಇದೆ.

ಕರ್ನಾಟಕ, ಕೇರಳ, ತಮಿಳುನಾಡು ಪೊಲೀಸರಿಗೆ ಬೇಕಾಗಿದ್ದ ವಿಕ್ರಂ ಗೌಡ

ವಿಕ್ರಂ ಗೌಡ ನಕ್ಸಲರ ನೇತ್ರಾವತಿ ದಳದ ನಾಯಕ. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವಿರೋಧಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ. ಆ ಸಂದರ್ಭದಲ್ಲಿ ನಕ್ಸಲ್​ ಚಳವಳಿಗೆ ಧುಮುಕಿದ್ದ ವಿಕ್ರಂ ಗೌಡ, ನಂತರದಲ್ಲಿ ನಕ್ಸಲ್ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ. ನಕ್ಸಲ್ ಹೋರಾಟದ ವೇಳೆ ಕರಾವಳಿ ಭಾಗದಲ್ಲಿ ನೇತ್ರಾವತಿ ದಳವನ್ನು ಮುನ್ನೆಡೆಸಿದ್ದ. ಮತ್ತೊಂದೆಡೆ, ಮಲೆನಾಡು ಭಾಗದಲ್ಲಿ ಮುಂಡಗಾರು ಲತಾ ತಂಡ ಸಕ್ರಿಯವಾಗಿತ್ತು.

ವಿಕ್ರಂ ಗೌಡ, ಮುಂಡಗಾರು ಲತಾ, ಜಯಣ್ಣ, ವನಜಾಕ್ಷಿ, ಸುಂದರಿ ಪತ್ತೆಗೆ 5 ಲಕ್ಷ ಬಹುಮಾನ ಘೋಷಣೆ ಮಾಡಲಾಗಿತ್ತು. ಸುಳಿವು ನೀಡಿದವರಿಗೆ ಬಹುಮಾನ ನೀಡುವುದಾಗಿ ಹೇಳಿತ್ತು. ಕಳೆದ 18 ವರ್ಷಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದ ವಿಕ್ರಂ ಗೌಡ ವಿರುದ್ಧ ಚಿಕ್ಕಮಗಳೂರು ಜಿಲ್ಲೆಯಲ್ಲೇ 13 ಪ್ರಕರಣ ದಾಖಲಾಗಿದ್ದವು. ಕರ್ನಾಟಕ ತಮಿಳುನಾಡು, ಕೇರಳದ ರಾಜ್ಯದಲ್ಲಿ 50 ಕ್ಕೂ ಹೆಚ್ಚು ಕೇಸ್ ದಾಖಲಾಗಿದ್ದವು.

Related posts

Leave a Comment