ಮಂಗಳೂರು: ಅತಿ ಅಪರೂಪದ ಪ್ರಕರಣವೊಂದರಲ್ಲಿ ಮಹಿಳೆ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಪ್ರಕರಣ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಡೆದಿದೆ. ಸಹಜ ಗರ್ಭಧಾರಣೆಯಲ್ಲೇ ತಾಯಿ ನಾಲ್ಕು ಮಕ್ಕಳಿಗೆ ಜನ್ಮನೀಡಿದ ಅಪರೂಪದ ಪ್ರಕರಣವಿದು.
ನವೆಂಬರ್ 9ರಂದು ಮಂಗಳೂರಿನ ಫಾ|ಮುಲ್ಲರ್ ಆಸ್ಪತ್ರೆಯಲ್ಲಿ ಸೆಸೇರಿಯನ್ ಮೂಲಕ ಹೆರಿಗೆಯಾಗಿದೆ. ಹುಟ್ಟಿದ ನಾಲ್ಕೂ ಶಿಶುಗಳಿಗೆ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಆರೈಕೆ ನೀಡಲಾಗಿದ್ದು ಕೆಲ ದಿನಗಳ ಹಿಂದೆಯಷ್ಟೇ ತಾಯಿ ತಂದೆ ತಮ್ಮ ಮಕ್ಕಳೊಂದಿಗೆ ಮನೆಗೆ ತೆರಳಿದ್ದಾರೆ. ಹುಟ್ಟಿರುವ ಮಕ್ಕಳಲ್ಲಿ ಎರಡು ಗಂಡಾದರೆ ಎರಡು ಹೆಣ್ಣು, ಈ ಅಪರೂಪದ ವಿದ್ಯಮಾನದ ಕುರಿತು ಆಸ್ಪತ್ರೆಯವರು ವಿವರ ನೀಡಿದ್ದಾರೆ. ಹುಟ್ಟುವಾಗ ಮಕ್ಕಳ ತೂಕ 1.1 ಕೆಜಿ, 1.2 ಕೆಜಿ, 800 ಗ್ರಾಮ್ ಹಾಗೂ 900 ಗ್ರಾಂ ಇದ್ದು ಕಳೆದೆರಡು ತಿಂಗಳಿನಿಂದ ನವಜಾತ ಶಿಶುಗಳ ವಾರ್ಡ್‌ನಲ್ಲಿ ಆರೈಕೆ ನೀಡಲಾಗಿತ್ತು.
ತೆಲಂಗಾಣ ಮೂಲದ ದಂಪತಿಗಳಾದ ತೇಜ ಹಾಗೂ ಬಾನೊತ್ ದುರ್ಗಾ ಈ ನಾಲ್ಕು ಮಕ್ಕಳನ್ನು ಪಡೆದ ಖುಷಿಯಲ್ಲಿದ್ದಾರೆ. ತೇಜ ಅವರು ಮಂಗಳೂರಿನಲ್ಲಿ ರೈಲ್ವೇ ಇಲಾಖೆಯಲ್ಲಿ ಅಧಿಕಾರಿಯಾಗಿದ್ದಾರೆ.ದುರ್ಗಾ ಅವರು ಗರ್ಭಧರಿಸಿದ ಬಳಿಕ ಸ್ಕ್ಯಾನಿಂಗ್ ಗೆಂದು ಫಾ.ಮುಲ್ಲರ್ ಆಸ್ಪತ್ರೆಗೆ ಬಂದಾಗ ನಾಲ್ಕು ಶಿಶುಗಳಿರುವುದು ಗೊತ್ತಾಗಿದೆ.
ಅಪರೂಪದ ಪ್ರಕರಣ ಇದಾಗಿದೆ, ಈ 7 ಲಕ್ಷದಲ್ಲಿ ಒಂದು ಪ್ರಕರಣ ಇಂಥದ್ದು ಬರುತ್ತದೆ, ಇಂತಹ ಕೇಸ್ ನಿಭಾಯಿಸುವುದು ಬಹಳ ಕ್ಲಿಷ್ಟಕರ ಎಂದು ಡಾ|ಅಲ್ಮೇಡಾ ತಿಳಿಸುತ್ತಾರೆ. 14 ವರ್ಷಗಳ ಹಿಂದೆ ಕೆಎಂಸಿಯಲ್ಲಿ ಇಂತಹದೇ ನಾಲ್ಕು ಮಕ್ಕಳ ಜನನವಾಗಿತ್ತು, ಅದರಲ್ಲಿ ನಾಲ್ಕೂ ಮಕ್ಕಳು ಗಂಡು ಎನ್ನುವುದು ಗಮನಾರ್ಹ.
