ಮಂಗಳೂರು : ಪಿಕಪ್ ಹಾಗೂ ಕಂಟೈನರ್ ನಡುವೆ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಕ್ಲಿನರ್ ನನ್ನು ತಮ್ಮದೇ ಸ್ಕೂಟಿಯಲ್ಲಿ ಆಸ್ಪತ್ರೆಗೆ ದಾಖಲಿಸಿ ಕದ್ರಿ ಪೊಲೀಸ್ ಠಾಣೆ ಮಹಿಳಾ ಸಿಬ್ಬಂದಿ ಮನ್ಶಿದಾ ಬಾನು ಮಾನವೀಯತೆ ಮೆರೆದಿದ್ದಾರೆ.
ಇಂದು ಅ.23 ಮುಂಜಾನೆ ಕೆಪಿಟಿ ಬಳಿ ಪಿಕಪ್ ಮತ್ತು ಕಂಟೈನರ್ ಲಾರಿ ಮಧ್ಯೆ ಅಪಘಾತವಾಗಿತ್ತು, ಈ ವೇಳೆ ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಕ್ಲೀನರ್ ನನ್ನು ಅದೇ ದಾರಿಯಲ್ಲಿ ಬಂದ ಕದ್ರಿ ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿ ಮನ್ಶಿದಾ ಬಾನು ರವರು ಕೂಡಲೇ ತಮ್ಮ ಸ್ಕೂಟಿಯಲ್ಲಿ ಎಜೆ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
ಅಪಘಾತ ಸಂದರ್ಭದಲ್ಲಿ ಸಹಾಯಕ್ಕೆ ಬರದೆ ಮುಂದೆ ಹೋಗುವ ಜನರಲ್ಲಿ ಮಹಿಳೆಯಾಗಿ ತಮ್ಮ ಸ್ಕೂಟಿಯಲ್ಲಿ ಗಾಯಾಳುವನ್ನು ಕೂರಿಸಿಕೊಂಡು ಹೋಗಿ ಆಸ್ಪತ್ರೆಗೆ ಮನ್ಶಿದಾ ಬಾನು ಅವರು ದಾಖಲಿಸಿದ್ದಾರೆ. ಮನ್ಶಿದಾ ಬಾನು ಅವರು ಕರ್ತವ್ಯ ಜೊತೆ ಸಮಯ ಪ್ರಜ್ಞೆ ಮೆರೆದಿರುತ್ತಾರೆ.
ಈ ವಿಚಾರವನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಕಮಿಷನರೇಟ್ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಕಾನ್ಸ್ಟೇಬಲ್ ಮನ್ಶಿದಾ ಬಾನು ಅವರ ಸಮಯಪ್ರಜ್ಞೆಯನ್ನು ಶ್ಲಾಘಿಸಿದ್ದಾರೆ.