ಮಂಗಳೂರು : ಸುಮಾರು 200ಕ್ಕೂ ಅಧಿಕ ಅಶಕ್ತ ಕುಟುಂಬಗಳಿಗೆ 60ಲಕ್ಷಕ್ಕೂ ಅಧಿಕ ಮೊತ್ತದ ಸೇವಾ ಯೋಜನೆಯನ್ನು ಮಾಡಿರುವ ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್(ರಿ.) ಇದರ ವತಿಯಿಂದ ಮತ್ತೊಂದು ಯೋಜನೆ ಮೂಲಕ ಬಡವರ ಕಣ್ಣೀರು ಒರೆಸಲು ಮನೆ ನಿರ್ಮಾಣ ಕಾರ್ಯಕ್ಕೆ ಕೈಜೋಡಿಸಿದೆ. ದಿನ ಕಳೆಯಲು ಕಷ್ಟದಲ್ಲಿದ್ದ ಕುಟುಂಬಕ್ಕೆ ಮನೆ ನಿರ್ಮಾಣ ಕಾರ್ಯ ಪ್ರಾರಂಭವಾಗಿದ್ದು, ಮೊದಲ ಹಂತವಾಗಿ ಭೂಮಿ ಪೂಜೆ ನೆರವೇರಿದೆ.
ಮಂಗಳೂರಿನ ಪಡೀಲ್ ನಿವಾಸಿ ಸುನಿತಾ ಎಂಬವರಿಗೆ ಈ ಮನೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಮನೆ ಕೆಲಸ ಮಾಡುತ್ತಾ ಮಾನಸಿಕ ಸ್ಥಿತಿ ಸರಿಯಿಲ್ಲದ ಅಣ್ಣನ ಜೊತೆ ಬದುಕು ಕಳೇಯುತ್ತಿರುವ ಸುನಿತಾ ಅವರ ಪರಿಸ್ಥಿತಿ ದಿನದೂಡಲು ಕಷ್ಟಕರವಾಗಿದೆ. ಇವರ ಕಷ್ಟ ನೋಡಿದ ಮನೋಜ್ ಅಳಪೆ ಭಟ್ರಬೆಟ್ಟು ಇವರು ಸದಾ ಸೇವೆಯಲ್ಲಿ ತೊಡಗಿರುವ ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್(ರಿ.) ಸಂಸ್ಥೆಗೆ ಮನವಿ ಮಾಡಿದ್ದಾರೆ. ತಕ್ಷಣ ಮನವಿಗೆ ಸ್ಪಂದಿಸಿದ ಸಂಸ್ಥೆ ಮಹಿಳೆಯ ಕಷ್ಟಕ್ಕೆ ಬೆನ್ನೆಲುಬಾಗಿ ನಿಲ್ಲಲು ತೀರ್ಮಾನಿಸಿತು.
ಮಂಗಳಾದೇವಿ ದೇವಸ್ಥಾನದ ಅನುವಂಶಿಕ ಆರ್ಚಕರಾದ ಸುಬ್ರಹ್ಮಣ್ಯ ಐತಾಳ್ ಸಮ್ಮುಖದಲ್ಲಿ ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್(ರಿ.) ಇದರ ಸ್ಥಾಪಕಾಧ್ಯಕ್ಷರಾದ ಮನೋಜ್ ಕೋಡಿಕೆರೆ ಇವರ ಉಪಸ್ಥಿತಿಯಲ್ಲಿ ಭೂಮಿ ಪೂಜೆಯ ವಿಧಿವಿಧಾನಗಳು ನಡೆಯಿತು.
ಈ ಸಂದರ್ಭದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಜಗದೀಶ್ ಗರೋಡಿ, ವಾಮನ್ ಅಳಪೆ ಗರೋಡಿ ದೇವಸ್ಥಾನದ ಟ್ರಸ್ಟ್ ಸದಸ್ಯರು, ಚರಣ್ ಅಳಪೆ ಭಟ್ರಬೆಟ್ಟು, ಶೋಭಾ ಪೂಜಾರಿ ಕಾರ್ಪೊರೇಟರ್ ಅಳಪೆ ಭಟ್ರಬೆಟ್ಟು, ವಿಕ್ಕಿ ಪೂಜಾರಿ ಪಡೀಲ್ ಪಡೀಲ್ ಚಾರಿಟೇಬಲ್ ಟ್ರಸ್ಟ್ ಇದರ ಸ್ಥಾಪಕಾಧ್ಯಕ್ಷರು, ಗೆಳೆಯರ ಬಳಗ ಸುರತ್ಕಲ್ ಇದರ ಸ್ಥಾಪಕಾಧ್ಯಕ್ಷರಾದ ನಾಗೇಶ್ ಪೂಜಾರಿ ತೋಕೂರು, ಮನೋಜ್ ಅಳಪೆ ಭಟ್ರಬೆಟ್ಟು ಸೇರಿದಂತೆ ಮಂಜಣ್ಣ ಸೇವಾ ಬ್ರಿಗೇಡ್ ಇದರ ಅಧ್ಯಕ್ಷರು ರಂಜಿತ್ ಜೆ ಶೆಟ್ಟಿ, ಕಾರ್ಯದರ್ಶಿ ಗಂಗಾಧರ್ ಶೆಟ್ಟಿ ತೋಕೂರು, ಕೋಶಾಧಿಕಾರಿ ರೇವಂತ್ ಹಾಗೂ ಪದಾಧಿಕಾರಿಗಳು ಸರ್ವ ಸದಸ್ಯರು ಉಪಸ್ಥಿತರಿದ್ದರು.