ಮಂಗಳೂರು: ಸಾಮಾನ್ಯವಾಗಿ ಕಸವನ್ನು ತ್ಯಾಜ್ಯ ಕೊಂಡೊಯ್ಯುವ ವಾಹನಕ್ಕೆ ನೀಡುತ್ತಾರೆ. ಆದರೆ ಜೀವಂತ ಶ್ವಾನವನ್ನು ಅದರ ಮಾಲಕರು ಪಾಲಿಕೆಯ ತ್ಯಾಜ್ಯ ಕೊಂಡೊಯ್ಯವ ವಾಹನಕ್ಕೆ ನೀಡಿರುವ ಕೃತ್ಯ ನಗರದ ಡೊಂಗರಕೇರಿಯಲ್ಲಿ ನಡೆದಿದೆ.
ಡೊಂಗರಕೇರಿಯಲ್ಲಿ ವಾಸಿಸುವ ಕುಟುಂಬವೊಂದರ ಸದಸ್ಯರು ವಿದೇಶದಲ್ಲಿ ವಾಸಿಸುತ್ತಿದ್ದರು. ಈ ಮನೆಯಲ್ಲಿ ವೃದ್ಧ ಮಹಿಳೆ ಮಾತ್ರ ವಾಸವಾಗಿದ್ದಾರೆ. ಈ ಮನೆಯ ನಾಯಿ ಇತ್ತೀಚೆಗೆ ಕೆಲವೆಡೆ ತೊಂದರೆ ನೀಡಿತ್ತು. ಹೀಗಾಗಿ ಮನೆಗೆ ಬರುವ ತ್ಯಾಜ್ಯ ವಿಲೇವಾರಿ ವಾಹನಕ್ಕೆ ಜೀವಂತ ನಾಯಿಯನ್ನು ನೀಡಲಾಗಿದೆ. ಜೊತೆಗೆ ತ್ಯಾಜ್ಯ ವಿಲೇವಾರಿ ಮಾಡುವ ಕಾರ್ಮಿಕರು ಕೂಡ ವಿರೋಧ ವ್ಯಕ್ತಪಡಿಸದೆ ತ್ಯಾಜ್ಯದೊಡನೆ ನಾಯಿಯನ್ನೂ ಪಚ್ಚನಾಡಿಗೆ ಕೊಂಡೊಯ್ದಿದ್ದಾರೆ.
ಈ ಘಟನೆಯ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಎರಡು ದಿನಗಳ ನಂತರ ಈ ಪ್ರಕರಣ ಬೆಳಕಿಗೆ ಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.
ಘಟನೆ ಕುರಿತು ಸಂಪೂರ್ಣ ಮಾಹಿತಿ ನೀಡುವಂತೆ ಪಶುಪಾಲನೆ ಇಲಾಖೆಯಿಂದ ಪಾಲಿಕೆಗೆ ನೋಟಿಸ್ ನೀಡಲಾಗಿದೆ. ತ್ಯಾಜ್ಯ ವಿಲೇವಾರಿ ವಾಹನ ಕೊಂಡೊಯ್ದಿದ್ದ ಶ್ವಾನ ಇನ್ನೂ ಪತ್ತೆಯಾಗಿಲ್ಲ. ಪಚ್ಚನಾಡಿ ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಕುವ ಕೆಲಸ ನಡೆಯುತ್ತಿದೆ ಎಂದು ತಿಳಿದುಬಂದಿದೆ.