
ಮಂಗಳೂರು: ದಿನದಿಂದ ದಿನಕ್ಕೆ ಸೈಬರ್ ವಂಚನೆ ಪ್ರಕರಣಗಳು ಜಾಸ್ತಿಯಾಗುತ್ತಿದ್ದು, ಪೊಲೀಸರು ಸೈಬರ್ ವಂಚಕರ ವಿರುದ್ಧ ಹದ್ದಿನ ಕಣ್ಣಿಟ್ಟಿದ್ದಾರೆ. ವ್ಯಕ್ತಿಯೊಬ್ಬರು ವಂಚಕರನ್ನು ನಂಬಿ ಬರೋಬ್ಬರಿ 77 ಲಕ್ಷ ಹಣ ಕಳೆದುಕೊಂಡಿದ್ದಾರೆ. ನಗರ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರ ಆರೋಪಿಗಳನ್ನು ಕೇರಳ ಕಣ್ಣೂರಿನ ಪತಾಯಕುನ್ನು ಉಮ್ಮರ್ ವಲಿಯ ಪರಂಬತ್ (41) ರಿಯಾಝ್ ಎಂ.ವಿ. (45) ಎಂದು ಗುರುತಿಸಲಾಗಿದೆ.
ವ್ಯಕ್ತಿಯೊಬ್ಬರಿಗೆ ವಾಟ್ಸಾಪ್‌ನಲ್ಲಿ ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರೆ ಹೆಚ್ಚಿನ ಲಾಭಾಂಶ ಪಡೆಯಬಹುದು ಎಂಬ ಸಂದೇಶ ಬಂದಿತ್ತು. ಇದನ್ನು ನಂಬಿ ಹೂಡಿಕೆ ಮಾಡಲು ಮುಂದಾಗಿದ್ದಾರೆ. ಸೈಬರ್ ವಂಚಕರು ವ್ಯಕ್ತಿಯಿಂದ ಹಂತ ಹಂತವಾಗಿ 77,96,322.08 ರೂ.ವನ್ನು ವಸೂಲಿ ಮಾಡಿದ್ದಾರೆ.
ಆದರೆ ಆರೋಪಿಗಳು ಕೊಟ್ಟ 77 ಲಕ್ಷ ಮಾತ್ರವಲ್ಲದೆ, ಲಾಭಾಂಶವನ್ನೂ ನೀಡದೆ ವಂಚಿಸಿದ್ದರು. ಈ ಬಗ್ಗೆ ಹಣ ಕಳೆದುಕೊಂಡ ವ್ಯಕ್ತಿಯು ಸೆನ್ ಠಾಣೆಗೆ ದೂರು ನೀಡಿದ್ದರು. ಅದರಂತೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.