ಕರಾವಳಿ ಜಿಲ್ಲೆಗಳು ರಾಜ್ಯದಲ್ಲಿಯೇ ವಿಶಿಷ್ಟ ಆಚರಣೆ, ಪದ್ಧತಿ, ಸಂಸ್ಕೃತಿಯ ಮೂಲಕ ಗುರುತಿಸಿಕೊಂಡಂಥ ಪ್ರದೇಶಗಳು. ಪ್ರಕೃತಿಯನ್ನು ಪೂಜಿಸುವ ಪರಿಪಾಠವಿರುವ ಕರಾವಳಿಯಲ್ಲಿ ಮಹಿಷನಿಗೂ ಪೂಜೆ ನಡೆಯುತ್ತಿದೆ ಎಂದರೆ ನೀವು ನಂಬಲೇಬೇಕು.
ಕಳೆದ ಕೆಲವು ವರ್ಷಗಳಿಂದ ಮಹಿಷ ದಸರಾ ಎನ್ನುವ ವಿಚಾರ ರಾಜ್ಯದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಒಂದು ಪಂಥ ಮಹಿಷ ಅಸುರ, ಅವನನ್ನು ಪೂಜಿಸಬಾರದು ಎಂದರೆ, ಇನ್ನೊಂದು ಪಂಥ ಮಹಿಷ ಎಂದರೆ ನಮ್ಮ ರಾಜ, ಅವನನ್ನ ನಾವು ಪೂಜಿಸುತ್ತೇವೆ ಎಂದು ಪ್ರತಿಪಾದಿಸುತ್ತಿದೆ. ಈ ಮಧ್ಯೆ, ಉಡುಪಿ ಜಿಲ್ಲೆಯ ಐತಿಹಾಸಿಕ ಪಟ್ಟಣ ಬಾರ್ಕೂರಿನಲ್ಲಿ ಮಹಿಷಾಸುರನ ಹೆಸರಿನ ದೇವಾಲಯವಿದೆ. ಅದಕ್ಕೆ ನಿತ್ಯವೂ ಪೂಜೆ ನಡೆಯುತ್ತಿದೆ.
ಉಡುಪಿ ಜಿಲ್ಲೆಯ ದೇವಾಲಯಗಳ ನಗರಿ ಎಂದೇ, ಹೆಸರುವಾಸಿಯಾಗಿರುವ ಬಾರ್ಕೂರಿನಲ್ಲಿ ಇಂದಿಗೂ ಕೂಡ ಮಹಿಷನಿಗೆ ನಿತ್ಯ ಪೂಜೆ ನಡೆಯುತ್ತದೆ. ಇಲ್ಲಿನ ಅರ್ಚಕ ಭಾಸ್ಕರ ಶಾಸ್ತ್ರಿ ತಿಳಿಸುವಂತೆ ಇಲ್ಲಿ ಮಹಿಷ ಎನ್ನುವ ಹೆಸರಿನ ಶಿವಗಣಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಶಿವನ ಪ್ರಥಮ ಗಣ ಎಂದು ಇಲ್ಲಿ ನಿತ್ಯವೂ ಮಹಿಷನಿಗೆ ಪೂಜೆಯ ಜೊತೆ ವರ್ಷಕ್ಕೆ ಒಮ್ಮೆ ತೊಟ್ಟಿಲು ಸೇವೆ ನಡೆಯುತ್ತದೆ.
ಇನ್ನು ಕರಾವಳಿ ಕರ್ನಾಟಕ ಈ ಹಿಂದೆ ಮಹಿಷ ಮಂಡಲ ಎಂದು ಗುರುತಿಸಿಕೊಳ್ಳುತ್ತಿದ್ದು, ಇಲ್ಲಿಗೆ ಮಹೀಷ ಎನ್ನುವ ರಾಜನಿದ್ದ ಎನ್ನುವ ಪ್ರತೀತಿಯೂ ಇದೆ. ಮಹಿ ಅಂದರೆ ಭೂಮಿ, ಈಶ ಎಂದರೆ ಒಡೆಯ ಅರ್ಥಾತ್ ಚಕ್ರವರ್ತಿ ಎನ್ನುವ ಕಾರಣಕ್ಕೆ ಇಲ್ಲಿ ಮಹಿಷನಿಗೆ ನಿತ್ಯ ಪೂಜೆ ನಡೆಯುತ್ತದೆ ಎನ್ನುವುದು ಇತಿಹಾಸ ತಜ್ಞರ ಮಾತು.
ಇತಿಹಾಸ ತಜ್ಞರು ಹೇಳುವುದೇನು.?
ಮಹಿಷ ಪಂಥ ಎಂಬುದು ಒಂದು ಕಾಲ್ಪನಿಕ ಪಂಥವಲ್ಲ, ಪಶ್ಚಿಮ ಕರಾವಳಿಯಲ್ಲಿ ಅದು ಇಂದಿಗೂ ಜೀವಂತ ಪಂಥವಾಗಿಯೇ ಇದೆ. ದೇಶದ ಏಕೈಕ ಮಹಿಷ ದೇವಾಲಯ ತುಳುರಾಜ್ಯದ ರಾಜಧಾನಿ ಎಂದು ಪ್ರಖ್ಯಾತವಾದ ಬಾರಕೂರಿನಲ್ಲಿದೆ ಎಂದು ನಿವೃತ್ತ ಪ್ರಾಚೀನ ಇತಿಹಾಸ ಮತ್ತು ಪುರಾತತ್ತ್ವ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ. ಟಿ.ಮುರುಗೇಶಿ ತಿಳಿಸಿದ್ದಾರೆ.
ಮೈಸೂರು ದಸರಾ ಸಂದರ್ಭದಲ್ಲಿ, ಭುಗಿಲೇಳುವ ವಿಷಮ ಸನ್ನಿವೇಶಕ್ಕೆ ಕಾರಣ ಮಹಿಷ ಪದವನ್ನು ತಪ್ಪಾಗಿ ತಿಳಿದು ಕೊಂಡಿರುವುದೇ ಕಾರಣವಾಗಿದೆ. ಮಹಿಷರು ಆಳಿದ ಊರು ಮೈಸೂರು. ಮಹಿಷರ ರಾಜ್ಯ ಮಹಿಷ ಮಂಡಲ. ಮಹಿಷ ಎಂದರೆ ಕೋಣ ಎಂದು ತಪ್ಪಾಗಿ ಅರ್ಥೈಸಲಾಗಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ರಿ.ಶ. 8-9ನೇ ಶತಮಾನದ ಆಳುಪರ ಶಾಸನಗಳಲ್ಲಿ ಮಯ್ಗೇಶ ಎಂಬ ಪದ ಬಳಕೆಯಾಗಿದೆ. ಮಹಿ ಎಂದರೆ ಭೂಮಿ. ಆದ್ದರಿಂದ ಮಹಿಗೆ+ಈಶ-ಮಹೀಷ/ಮಯ್ಗೇಶ. ಈಗಲೂ ಮಹಿಷಿ ಎಂದರೆ ರಾಣಿ ಎಂಬ ಅರ್ಥವೇ ಇದೆ. ಮಹಿಷಿ ರಾಣಿಯಾದರೆ, ಮಹಿಷ ರಾಜನಾಗಬೇಕಲ್ಲವೆ? ಎಂದು ಅವರು ಹೇಳಿಕೆಯಲ್ಲಿ ಪ್ರತಿಪಾದಿಸಿದ್ದಾರೆ. ಬಾರಕೂರಿನ ಮಹಿಷ ದೇವಾಲಯದಲ್ಲಿನ ಮಹಿಷ ಶಿಲ್ಪ ಅತ್ಯಂತ ಕುತೂಹಲಕಾರಿಯಾಗಿದೆ.
ನಂದಿಯ ತಲೆ ಹಾಗೂ ಮಾನವ ದೇಹದ ರಚನೆಯನ್ನು ಹೊಂದಿರುವ ಈ ಶಿಲ್ಪ, ಮಹಿಷ ಪಂಥದ ದೊರೆಗಳು ನಂದಿಯ ಮುಖವಾಡವನ್ನು ಧರಿಸಿ ಆಳ್ವಿಕೆ ನಡೆಸುತ್ತಿದ್ದರು ಮತ್ತು ನಂದಿಯ ಮುಖವಾಡವನ್ನು ಧರಿಸಿ ಯುದ್ಧಗಳಲ್ಲಿ ಭಾಗವಹಿಸುತ್ತಿದ್ದರೆಂಬ ಕುತೂಹಲಕಾರಿ ವಿಷಯದ ಮೇಲೆ ಬೆಳಕು ಚೆಲ್ಲುತ್ತದೆ. ಮಹಿಷ ದೈವವನ್ನು ಫಲವತ್ತತೆಯ ದೈವವಾಗಿ ಕರಾವಳಿಯಲ್ಲಿ ಆರಾಧಿಸಲಾಗುತ್ತದೆ.