ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇಗುಲದಲ್ಲಿ ಅಮ್ಮನವರು ಎಷ್ಟು ಪ್ರಸಿದ್ಧರೋ ಅಷ್ಟೇ ಪ್ರಸಿದ್ದಿ ಜನರನ್ನು ಆಕರ್ಷಿಸುವ ಶಕ್ತಿ ಇರೋದು ಮಹಾಲಕ್ಷ್ಮಿಗೆ. ದುರ್ಗೆಯ ಸನ್ನಿಧಾನದಲ್ಲಿ ಇರುವ ಈ ಆನೆಯ ತುಂಟಾಟ ನಿಜಕ್ಕೂ ಜನರ ಮನಸ್ಸಿನಲ್ಲಿ ಹಾಸುಹೊಕ್ಕಾಗಿದೆ. ಆಕೆ ಮಾಡುವ ಚೇಷ್ಟೆ, ಆಕೆಯ ದಿನಚರಿ, ಆಟೋಟ ಭಕ್ತರಲ್ಲಿ ವಿಶೇಷ ಪ್ರೀತಿ ಮೂಡಿಸಿದೆ.
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿರುವ ಮಹಾಲಕ್ಷ್ಮಿ ವಿವಿಧ ವಿಚಾರಗಳಲ್ಲಿ ಮೆಚ್ಚುಗೆಗೆ ಪಾತ್ರಳಾಗುತ್ತಿದ್ದಾಳೆ. ಫುಟ್‌ಬಾಲ್ ಅಂದರೆ ಇಷ್ಟಪಡುವ, ಕ್ರಿಕೆಟ್ ಅಂದರೆ ತುಸು ಹೆಚ್ಚೇ ಪ್ರೀತಿಸುವ ಈ ಆನೆ ಸ್ನಾನಕ್ಕಿಳಿದರೆ ಅರ್ಧ ಗಂಟೆ ನೀರಲ್ಲೇ ಕಾಲ ಕಳೆಯುತ್ತದೆ. ಗಂಟೆ ಬಡಿದು ದೇವರ ಧ್ಯಾನ ಮಾಡುವ ಆನೆ ಎಲ್ಲರಿಗೂ ಅಚ್ಚುಮೆಚ್ಚು.
ಕಟೀಲು ಪರಿಸರದಲ್ಲಿ ಇದೀಗ ಮಹಾಲಕ್ಷ್ಮಿಯದ್ದೇ ಮಾತು. ಕಳೆದ 3 ದಶಕಗಳಿಂದ ಕಟೀಲು ದೇವಳದಲ್ಲಿ ಅಶ್ರಯ ಪಡೆದ ಮಹಾಲಕ್ಷ್ಮಿಗೆ ಈಗ 34ರ ಹರೆಯ. ಪ್ರತೀ ದಿನ ಆಟ, ತುಂಟಾಟದಲ್ಲಿ ಕಾಲ ಕಳೆಯುವ ಮಹಾಲಕ್ಷ್ಮಿ ಕಳೆದ ಕೆಲ ತಿಂಗಳುಗಳಿ0ದ ಫುಟ್ ಬಾಲ್, ಕ್ರಿಕೆಟ್ ಆಟಗಳನ್ನು ಆಡುತ್ತಿದ್ದಾಳೆ. ಸ್ವತಃ ಸ್ನಾನವನ್ನೂ ಮಾಡುತ್ತಾಳೆ. ಹೆಚ್ಚಿನ ಎಲ್ಲಾ ದೇವಸ್ಥಾನಗಳಲ್ಲಿ ಆನೆಗಳನ್ನು ಸಾಕುವಂತೆ ಕಟೀಲು ದೇವಳದಲ್ಲಿಯೂ ಆನೆ ಸಾಕಲಾಗುತ್ತಿದೆ. ಸಹಸ್ರ ಸಂಖ್ಯೆಯಲ್ಲಿ ತನ್ನತ್ತ ಗಮನ ಸೆಳೆಯುವಂತೆ ಮಾಡುತ್ತಿದ್ದಾಳೆ ಮಹಾಲಕ್ಷ್ಮಿ.
ಕಟೀಲು ದೇವಳದಲ್ಲಿ ಈ ಹಿಂದೆ ನಾಗರಾಜ ಎಂಬ ಗಂಡಾನೆ ಇತ್ತು. ಈ ಆನೆಯ ಸಾವಿನ ನಂತರ 1994ರಲ್ಲಿ ಹೆಣ್ಣು ಮರಿಯಾನೆಯನ್ನು ತಂದು ಅದಕ್ಕೆ ಮಹಾಲಕ್ಷ್ಮಿ ಎಂದು ಹೆಸರಿಡಲಾಗಿತ್ತು.
ಫುಟ್‌ಬಾಲ್, ಕ್ರಿಕೆಟ್ ಆಟಗಳನ್ನು ಸದ್ಯಕ್ಕೆ ಕಲಿಸಲಾಗಿದ್ದು, ಆನೆಯೂ ಖುಷಿಯಿಂದ ಆಟ ಆಡುತ್ತಿದೆ. ಪ್ರತಿನಿತ್ಯ ಒಂದೆರಡು ಗಂಟೆ ಆನೆಗೆ ಅಭ್ಯಾಸವನ್ನು ನಡೆಸಲಾಗುತ್ತಿದೆ. ಅಲ್ಲದೇ ಪೈಪ್ ಮೂಲಕ ನೀರು ಕೊಟ್ಟರೆ ಪೈಪ್ ಹಿಡಿದು ಮಹಾಲಕ್ಷ್ಮಿಯೇ ಸ್ನಾನಕ್ಕಿಳಿಯುತ್ತಾಳೆ. ಪೈಪ್ ಮತ್ತು ಸೊಂಡಿಲ ಮೂಲಕ ತನ್ನ ಬೆನ್ನು, ಮೈ ಕೈಗೆ ನೀರು ಹಾಕಿ ಸ್ನಾನ ಮಾಡುತ್ತದೆ. ಅಲ್ಲದೆ ಪ್ರತೀ ದಿನ ದೇವಸ್ಥಾನಕ್ಕೆ ಬಂದು ಗಂಟೆ ಬಡಿದು ನಮಸ್ಕಾರ ಮಾಡಿ ಹೋಗುತ್ತದೆ.
ಪ್ರತೀ ದಿನ ಬೆಳಗ್ಗೆ 7 ಗಂಟೆಗೆ ಆನೆ ಲಾಯ ಸ್ವಚ್ಛ ಮಾಡಿ 9 ಗಂಟೆಗೆ ಆನೆಗೆ ಸ್ನಾನ ಮಾಡಿಸಲಾಗುತ್ತದೆ. 10.30ಕ್ಕೆ ಬೈಹುಲ್ಲು, ಬೆಳ್ತಿಗೆ ಅಕ್ಕಿ, ಬೆಲ್ಲ, ಬಾಳೆ ಹಣ್ಣು, ಬೀಟ್ ರೋಟ್, ಸೌತೆಕಾಯಿಯನ್ನು ಆಹಾರದ ರೂಪದಲ್ಲಿ ಕೊಡಲಾಗುತ್ತದೆ. ಮಧ್ಯಾಹ್ನ 1.30 ಕ್ಕೆ ಬೇಳೆಕಾಳಿನ ಮುದ್ದೆ, 2.45 ಕ್ಕೆ ಸೊಪ್ಪು ನೀಡಲಾಗುತ್ತದೆ. 3.30ರಿಂದ 6.30ರವರೆಗೆ ಆನೆಗೆ ವಿಶ್ರಾಂತಿ. ರಾತ್ರಿ ಬೈಹುಲ್ಲು, ಬಾಳೆ ಹಣ್ಣು ನಂತರ ಸೊಪ್ಪು ನೀಡಲಾಗುತ್ತದೆ. ಹೀಗೆ ದಿನಕ್ಕೆ ಸರಿಸುಮಾರು 250 ಕಿಲೋ ನಷ್ಟು ಆಹಾರ ಆನೆಗೆ ಬೇಕು.
6 ತಿಂಗಳಿಗೊ0ದು ಸಲ ಆನೆಯ ಆರೋಗ್ಯ ತಪಾಸಣೆಗೆ ಸಕ್ರೆಬೈಲಿನಿಂದ ವೈದ್ಯರು ಆಗಮಿಸಿದರೆ, ತಿಂಗಳಿಗೊಮ್ಮೆ ಸ್ಥಳೀಯ ಪಶುವೈದ್ಯರು ಬಂದು ತಪಾಸಣೆ ಮಾಡುತ್ತಾರೆ. ಶಿವಮೊಗ್ಗದ ಸಕ್ರೆಬೈಲಿನಿಂದ ಬಂದ ಮೂವರು ಮಾವುತರು ಆನೆಯನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದು, ಬೇಕುಬೇಕಾದವುಗಳನ್ನು ನೀಡುತ್ತಾರೆ. ಸಕ್ರೆಬೈಲಿನಲ್ಲಿ ಆನೆ ಪಳಗಿಸುವ ವಿದ್ಯೆಯನ್ನು ಇವರು ಬಾಲ್ಯದಿಂದಲೇ ಕಲಿತಿದ್ದು, ಕಟೀಲಿನ ಆನೆಗೂ ಕಲಿಸುತ್ತಿದ್ದಾರೆ. ಎಷ್ಟೇ ಭಕ್ತರು ಬಂದರೂ ಮಹಾಲಕ್ಷ್ಮಿಯು ಮುನಿಸಿಕೊಳ್ಳದೆ ಎಲ್ಲರನ್ನೂ ಹರಸುತ್ತಾ ಪ್ರೀತಿ ಸಂಪಾದಿಸುತ್ತಾಳೆ. ಭಕ್ತರಂತೂ ಆಕೆಯ ಜತೆ ಸೆಲ್ಫಿ ತೆಗೆಯಲು ಮುಗಿಬೀಳುವುದೂ ಉಂಟು. ಈಕೆಯ ತುಂಟಾಟಕ್ಕೆ ಮತ್ತಾರೂ ಸಾಟಿಯಿಲ್ಲ. ಮುದ್ದಿನ ಮಹಾಲಕ್ಷ್ಮಿ ನಿಜಕ್ಕೂ ಕಟೀಲಿನ ಮಹಾಲಕ್ಷ್ಮಿಯೇ..!