ಮಂಗಳೂರು: ಭ್ರಷ್ಟಾಚಾರ ಆರೋಪದ ಹಿನ್ನೆಲೆ ಗಾಢ ನಿದ್ದೆಯಲ್ಲಿದ್ದ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಗುರುವಾರ ಬೆಳ್ಳಂಬೆಳಗ್ಗೆ ಶಾಕ್ ಕೊಟ್ಟಿದ್ದಾರೆ. 4 ಅಧಿಕಾರಿಗಳಿಗೆ ಸೇರಿದ 25 ಸ್ಥಳಗಳಿಗೆ ಏಕಾಏಕಿ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಅವರ ಚಿಕ್ಕಬಳ್ಳಾಪುರದ ಮನೆ, ಮಂಗಳೂರು ನಗರದಲ್ಲಿ ವಾಸವಿದ್ದ ಮನೆ ಮತ್ತು ಕಚೇರಿ ಮೇಲೆ ಇಂದು ಬೆಳಗ್ಗೆ ಏಕಕಾಲದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮಂಗಳೂರು ನಗರದ ಕಂಕನಾಡಿ ಸಮೀಪದ ವೆಲೆನ್ಸಿಯಾದಲ್ಲಿರುವ ಕೃಷ್ಣವೇಣಿಯವರ ನಿವಾಸ ಹಾಗೂ ನಗರದ ಮಲ್ಲಿಕಟ್ಟೆಯಲ್ಲಿರುವ ಕಚೇರಿ ಮೇಲೆ ಮಾತ್ರವಲ್ಲದೆ, ಚಿಕ್ಕಬಳ್ಳಾಪುರದಲ್ಲಿರುವ ನಿವಾಸದ ಮೇಲೂ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ.
ಲೋಕಾಯುಕ್ತ ಎಸ್ಪಿ ನಟರಾಜ್ ನೇತೃತ್ವದಲ್ಲಿ ಮಂಗಳೂರು ಹಾಗೂ ಚಿಕ್ಕಬಳ್ಳಾಪುರ ಲೋಕಾಯುಕ್ತ ಅಧಿಕಾರಿಗಳ ತಂಡ ಈ ಕಾರ್ಯಾಚರಣೆ ನಡೆಸಿದ್ದು, ದಾಖಲೆಪತ್ರಗಳ ಪರಿಶೀಲನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಎರಡು ತಿಂಗಳ ಹಿಂದೆಯಷ್ಟೇ ಮಂಗಳೂರಿಗೆ ವರ್ಗಾವಣೆಯಾಗಿ ಬಂದಿದ್ದಾರೆ.
ಚಿಕ್ಕಬಳ್ಳಾಪುರದ ಮನೆಯಲ್ಲಿ ಪತ್ತೆಯಾಯ್ತು ಅಪಾರ ಪ್ರಮಾಣ ಚಿನ್ನಾಭರಣ;
ಮೂರು ವಾಹನಗಳಲ್ಲಿ ಬಂದ ಲೋಕಾಯುಕ್ತ ಪೊಲೀಸರು, ಕೃಷ್ಣವೇಣಿ ಅವರ ಮನೆಯನ್ನಿಡೀ ಶೋಧ ಕಾರ್ಯ ನಡೆಸಿದ್ದಾರೆ. ಈ ವೇಳೆ ಅಪಾರ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಸೇರಿದಂತೆ ಹಲವು ಐಷರಾಮಿ ವಸ್ತುಗಳು ಪತ್ತೆಯಾಗಿದೆ. ಅದರ ಮೌಲ್ಯ ಎಷ್ಟೆಂದು ತಿಳಿದುಬಂದಿಲ್ಲ.
ಬೆoಗಳೂರು ನಗರ ಯೋಜನಾ ಇಲಾಖೆಯ ನಿರ್ದೇಶಕ ಎನ್.ಕೆ.ತಿಪ್ಪೇಸ್ವಾಮಿ ಅವರ ಬನಶಂಕರಿಯ 1ನೇ ಹಂತದಲ್ಲಿರುವ ನಿವಾಸ, ಅಬಕಾರಿ ಇಲಾಖೆಯ ಅಧೀಕ್ಷಕ ಮೋಹನ್.ಕೆ. ಅವರ ಕನಕಪುರ ರಸ್ತೆಯಲ್ಲಿರುವ ನಿವಾಸ, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಅವರ ಮಂಡ್ಯದ ನಿವಾಸ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಎಂ.ಸಿ.ಕೃಷ್ಣವೇಣಿ ಅವರ ಚಿಕ್ಕಬಳ್ಳಾಪುರದ ನಿವಾಸಗಳಲ್ಲಿ ಶೋಧ ನಡೆಯುತ್ತಿದೆ.