ಕಣ್ಣೂರು: ವ್ಯಾಪಾರಿಯ ಮನೆಯಿಂದ ಬರೋಬ್ಬರಿ ಒಂದು ಕೋಟಿ 73 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಹಾಗೂ ಒಂದು ಕೋಟಿ ರೂಪಾಯಿ ಕಳ್ಳತನಗೈದ ಘಟನೆ ನಡೆದಿದೆ. ಮದುವೆ ಕಾರ್ಯಕ್ರಮ ಹಿನ್ನಲೆ ತಮಿಳುನಾಡಿಗೆ ಹೋಗಿದ್ದಾಗ ಕಳ್ಳರು ಕೈಚಳಕ ತೋರಿದ್ದಾರೆ.
ತಳಿಪರಂಬ ಮನ್ನ ಕೆಎಸ್‌ಇಬಿ ಬಳಿಯ ಅಶ್ರಫ್ ಟ್ರೇಡರ್ಸ್ ಮಾಲಕ ವಳಪಟ್ಟಣದ ಕೆ.ಪಿ. ಅಶ್ರಫ್‌ರ ಮನೆಯಿಂದ ಕಳವು ನಡೆದಿದೆ. ಅಶ್ರಫ್ ಹಾಗೂ ಕುಟುಂಬ ನವಂಬರ್ 19ರಂದು ಮಧುರೈಯಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳಿದ್ದರು. ನ.24ರ ರಾತ್ರಿ 10.30ರ ವೇಳೆ ಮನೆಗೆ ಮರಳಿ ಬಂದಾಗ ಕಳವು ನಡೆದ ವಿಷಯ ಬೆಳಕಿಗೆ ಬಂದಿದೆ.
ಮನೆಯ ಹಿಂಭಾಗದ ಕಿಟಕಿ ಮುರಿದು ಕಳ್ಳರು ಒಳಗೆ ಪ್ರವೇಶಿಸಿದ್ದಾರೆ. ಮನೆಯ ಒಳಗೆ ಹಾಗೂ ಆವರಣದಲ್ಲಿದ್ದ ಸಿಸಿ ಕ್ಯಾಮರಾಗಳನ್ನು ಹಾನಿಗೊಳಿಸಿ ಕೃತ್ಯ ಎಸಗಲಾಗಿದೆ. ಹಣ ಹಾಗೂ ಚಿನ್ನಾಭರಣಗಳನ್ನು ಬೆಡ್‌ರೂಂನ ಕಪಾಟಿನಲ್ಲಿರಿಸಲಾಗಿತ್ತು. ಅವುಗಳನ್ನೆಲ್ಲಾ ಕಳ್ಳರು ದೋಚಿದ್ದಾರೆ.
ವಿಷಯ ತಿಳಿದು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತಲುಪಿ ಪರಿಶೀಲನೆ ಆರಂಭಿಸಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದಾರೆ. ಕಳೆದ ಕೆಲವು ದಿನಗಳಿಂದ ವಿವಿಧೆಡೆಗಳಲ್ಲಿ ವ್ಯಾಪಕ ಕಳವು ನಡೆದಿದೆ. ಇದರಿಂದ ಜನರು ತೀವ್ರ ಆತಂಕಕ್ಕೊಳಗಾಗಿರುವಾಗಲೇ ಬೆನ್ನಲ್ಲೇ ವ್ಯಾಪಾರಿಯ ಮನೆಯಿಂದ ಭಾರೀ ಪ್ರಮಾಣದ ನಗ-ನಗದು ದೋಚಿದ ಘಟನೆ ನಡೆದಿದೆ.