
ಮಂಗಳೂರು: ಟೀಮ್ EDUಕಾರುಣ್ಯ ಆಶ್ರಯದಲ್ಲಿ ಭಾನುವಾರ ಕೂಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ನಡೆದ ದಿ.ವಿಶ್ವನಾಥ ಆಳ್ವ ಸ್ಮರಣಾರ್ಥ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಬಿ.ಕೆ ಉಮೇಶ್ ಮಲರಾಯಸಾನ ಕೂಳೂರು ಮಾಲೀಕತ್ವದ, ಜಯಶೀಲ ನೇತೃತ್ವದ ಕೂಳೂರು ಫ್ರೆಂಡ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಸಂಗಮ್ ಯಂಗ್ ಬಾಯ್ಸ್ ಕೃಷ್ಣಾಪುರ ರನ್ನರ್ ಅಪ್ ಆಗಿದೆ.
32 ತಂಡಗಳು ಭಾಗವಹಿಸಿದ್ದ ಫೈನಲ್ ಪಂದ್ಯದಲ್ಲಿ ಕೂಳೂರು ಫ್ರೆಂಡ್ಸ್ ತಂಡ 9 ವಿಕೆಟ್ ಗಳಿಂದ ಸಂಗಮ್ ಯಂಗ್ ಬಾಯ್ಸ್ ತಂಡವನ್ನು ಸೋಲಿಸಿ ಪ್ರಶಸ್ತಿ ಜಯಿಸಿತು. ಇದಕ್ಕೂ ಮೊದಲು ನಡೆದ ಸೆಮಿಫೈನಲ್ ನಲ್ಲಿ ಸಂಗಮ್ ಯಂಗ್ ಬಾಯ್ಸ್ ತಂಡ ರೆಡ್ ವಿಂಗ್ಸ್ ಕುಂಜತಬೈಲ್ ತಂಡವನ್ನು ಸೋಲಿಸಿದರೆ, ಕೂಳೂರು ಫ್ರೆಂಡ್ಸ್ ತಂಡ ನವಜ್ಯೋತಿ ಮಲ್ಲೂರು ತಂಡವನ್ನು ಸೋಲಿಸಿತ್ತು.
ಬಹುಮಾನ ವಿತರಣಾ ಸಮಾರಂಭದಲ್ಲಿ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅರ್ಜುನ್ ಭಂಡಾರ್ಕರ್, ಉದ್ಯಮಿ ರಮೇಶ್ ಕೋಟ್ಯಾನ್, ಕೀರ್ತಿಶೇಷ ದಿ. ವಿಶ್ವನಾಥ ಆಳ್ವ ಅವರ ಪುತ್ರ ಸುಧೀರ್ ಆಳ್ವ, ಮೊಮ್ಮಗ ಶ್ರೇಯಸ್ ಆಳ್ವ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶಾಂತಿನಗರ ಇದರ ಕಾರ್ಯಾಧ್ಯಕ್ಷ ವಿನಯ್ ಕುಮಾರ್, ಉದಯ ಯುವಕ ಮಂಡಲ ಅಬ್ಬೆಟ್ಟು ಇದರ ಅಧ್ಯಕ್ಷ ದಿನೇಶ್ ಕುಮಾರ್, EDUಕಾರುಣ್ಯದ ವಿದ್ಯಾರ್ಥಿನಿ ತ್ರಿಷಾ ಆಚಾರ್ಯ ಉಪಸ್ಥಿತರಿದ್ದರು. ರಂಜಿತ್ ಶೆಟ್ಟಿ ಪಂಜಿಮೊಗರು ಕಾರ್ಯಕ್ರಮ ನಿರೂಪಿಸಿದರು. ಟೀಮ್ ಎಜುಕಾರುಣ್ಯದ ಸಂಚಾಲಕ ಮೋಹನ್‌ದಾಸ್ ಮರಕಡ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿ ವಂದಿಸಿದರು.
ಬೆಳಗ್ಗೆ ಟೂರ್ನಿಯನ್ನು ಮಂಗಳೂರು ಮೇಯರ್ ಮನೋಜ್ ಕುಮಾರ್ ಕೋಡಿಕಲ್ ಉದ್ಘಾಟಿಸಿದರು. ಖ್ಯಾತ ಯಕ್ಷಗಾನ ಪ್ರಸಂಗಕರ್ತ, ಉದ್ಯಮಿ ಜಿ.ಕೆ.ಶ್ರೀನಿವಾಸ ಸಾಲ್ಯಾನ್, ಕೋಟಿ ಚೆನ್ನಯ ಸೇವಾ ಬ್ರಿಗೇಡ್ ಅಧ್ಯಕ್ಷ, ಕಾರ್ಪೊರೇಟರ್ ಕಿರಣ್ ಕುಮಾರ್ ಕೋಡಿಕಲ್, ರೋಶನಿ ನಿಲಯ ಕಾಲೇಜಿನ ಉಪನ್ಯಾಸಕ ಡಾ.ಪ್ರಶಾಂತ್ ಭಟ್, ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರಿಯ ಮೈಸೂರು ಪ್ರಾಂತೀಯ ವಿಶೇಷ ಅಧಿಕಾರಿ ಗುರುಪ್ರಸಾದ್ ಬಂಗೇರ, ಉದಯ ಯುವಕ ಮಂಡಲ ಅಬ್ಬೆಟ್ಟು ಇದರ ಅಧ್ಯಕ್ಷ ದಿನೇಶ್ ಕುಮಾರ್, ಪತ್ರಕರ್ತರಾದ ಹರೀಶ್ ಮೋಟುಕಾನ, ಸುರೇಶ್ ಡಿ.ಪಳ್ಳಿ, ಪ್ರಮೋದ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಶಾಸಕ ಡಾ.ವೈ.ಭರತ್ ಶೆಟ್ಟಿ, ಬಿಜೆಪಿ ದ.ಕ. ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷ ಶಾನವಾಜ್, ಬಿಜೆಪಿ ಉತ್ತರ ಮಂಡಲ ಪ್ರಧಾನ ಕಾರ್ಯದರ್ಶಿ ರಣದೀಪ್ ಕಾಂಚನ್, ಶ್ರೀ ಗುರುಶಕ್ತಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಚಂದ್ರಶೇಖರ್ ಕುಮಾರ್, ಕಾರ್ಪೊರೇಟರ್ ಸಂಗೀತಾ ಆರ್.ನಾಯಕ್, ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಮೊದಲಾದವರು ಭೇಟಿ ನೀಡಿ ಶುಭ ಹಾರೈಸಿದರು.
ಆರು ಎಸೆತದಲ್ಲಿ ಆರು ಸಿಕ್ಸರ್!
ಎರಡು ಪಿಚ್‌ಗಳಲ್ಲಿ ನಡೆದ ಪಂದ್ಯದಲ್ಲಿ ವಿಶೇಷ ದಾಖಲೆಯೊಂದು ಗೋಲ್ಡ್‌ಫಿಂಚ್ ಮೈದಾನದಲ್ಲಿ ಸೃಷ್ಟಿಯಾಯಿತು. ಉದಯ ಅಬ್ಬೆಟ್ಟು ತಂಡದ ಎಡಗೈ ಆರಂಭಿಕ ಆಟಗಾರ ಚರಣ್ ಅಬ್ಬೆಟ್ಟು ಪ್ರಿ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸತತ ಆರು ಎಸೆತಗಳಲ್ಲಿ ಆರು ಸಿಕ್ಸರ್ ಬಾರಿಸಿ ನೆರೆದವರ ಗಮನ ಸೆಳೆದರು. 43 ರನ್ ಗುರಿ ಬೆನ್ನಟ್ಟುವ ವೇಳೆ ಒಂದೇ ಓವರ್‌ನಲ್ಲಿ 36 ರನ್ ಸಂಪಾದಿಸಿ ತಂಡವನ್ನು ಮುಂದಿನ ಹಂತಕ್ಕೇರಿಸಿದರು.