Mangalore and Udupi news
ಅಪರಾಧಗ್ರೌಂಡ್ ರಿಪೋರ್ಟ್ರಾಜಕೀಯರಾಜ್ಯ

ನಟೋರಿಯಸ್‌ಗಳಿಗೆ ಸಿಂಹ ಸ್ವಪ್ನರಾದ ಮಹಿಳಾ ಅಧಿಕಾರಿ ಡಾ. ಅನಿತಾ..! ಹಳೇ ವಿಡಿಯೋ ವೈರಲ್ ಮಾಡಿ ವರ್ಚಸ್ಸಿಗೆ ಮಸಿ ಬಳಿಯುವ ಯತ್ನ – ಖೈದಿಗಳ ಜೊತೆ ಶಾಮೀಲಾದ ಜೈಲಿನ ಸಿಬ್ಬಂದಿಗಳು..!?

ಕಲಬುರಗಿ ಕೇಂದ್ರ ಕಾರಾಗೃಹ ಸದ್ಯ ವಿವಾದದ ಕೇಂದ್ರ ಬಿಂದುವಾಗಿದೆ. ಖೈದಿಗಳಿಗೆ ರಾಜಾತಿಥ್ಯ ನೀಡುವ ವಿಡಿಯೋಗಳು ಹೊರಬಿದ್ದಿದೆ. ಜೈಲಿನ ಕರ್ಮಕಾಂಡ ಬಯಲಾಗಿದ್ದು, ಮುಖ್ಯ ಅಧೀಕ್ಷಕಿ ಡಾ.ಅನಿತಾ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಜೈಲಿಗೆ ಎಂಟ್ರಿಕೊಟ್ಟು ಖಡಕ್ ರೂಲ್ ಮಾಡಿದ್ದ ಮಹಿಳಾ ಅಧಿಕಾರಿಯ ನಡೆಯನ್ನ ಸಹಿಸಲಾಗದೇ ವರ್ಗಾವಣೆ ಮಾಡುವ ಕುತಂತ್ರ ನಡೆದಿರುವುದಾಗಿ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಕೇಂದ್ರ ಕಾರಾಗೃಹವನ್ನು ತನ್ನ ಹದ್ದುಬಸ್ತಿನಲ್ಲಿರಿಸಿದ್ದೇ ಈಗ ಹಳೇ ವಿಡಿಯೋ ವೈರಲ್ ಮಾಡಲು ಕಾರಣ ಎಂಬ ಸ್ಪೋಟಕ ಅಂಶ ಬಯಲಾಗಿದೆ.

ನಟೋರಿಯಸ್‌ಗಳಿಗೆ ಸಿಂಹ ಸ್ವಪ್ನರಾದ ಮಹಿಳಾ ಅಧಿಕಾರಿ ಡಾ. ಅನಿತಾ
ಜೈಲು ಮುಖ್ಯ ಅಧೀಕ್ಷಕಿಯಾಗಿ ಡಾ.ಅನಿತಾ ಅವರು ಅಧಿಕಾರ ಸ್ವೀಕಾರ ಮಾಡಿದ ಬೆನ್ನಲ್ಲೇ ಜೈಲಿನಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿಗೆ ತಂದಿದ್ದಾರೆ. ಜೈಲಿಗೆ ಪೂರೈಕೆ ಆಗ್ತಿದ್ದ ಮದ್ಯ, ಸಿಗರೇಟ್, ಡ್ರಗ್ಸ್ ಹೀಗೆ ಅನೇಕ ಅನೈತಿಕ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಮುಂದಾಗಿದ್ದಾರೆ. ಜೈಲಿನ ಖೈದಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಜೈಲಿನ ಸೆಲ್ ಸೆಲ್‌ಗಳನ್ನೂ ಜಾಲಾಡಿ ಮೊಬೈಲ್, ಗುಡ್ಕಾ, ಸಿಗರೇಟ್, ಮದ್ಯ, ಡ್ರಗ್ಸ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಇದನ್ನು ಸಹಿಸಲಾಗದ ಮಂದಿ ಡಾ ಅನಿತಾ ವಿರುದ್ಧ ಷಡ್ಯಂತ್ರ ರೂಪಿಸಲು ಮುಂದಾಗಿದ್ದಾರೆ.

ಎರಡು ತಿಂಗಳ ಹಿಂದಿನ ವಿಡಿಯೋ ವೈರಲ್
ಶಂಕಿತ ಉಗ್ರ ಜುಲ್ಫಿಕರ್, ಶಿವಮೊಗ್ಗ ರೌಡಿಶೀಟರ್ ಬಚ್ಚನ್ ಸೇರಿ ಆರು ನಟೋರಿಯಸ್ ಕೈದಿಗಳ ಶಿಫ್ಟ್ ಬೆನ್ನಲ್ಲೇ ಜೈಲಿನಲ್ಲಿನ ಮತ್ತಷ್ಟು ವೀಡಿಯೋ ವೈರಲ್ ಆಗಿವೆ. 2 ತಿಂಗಳ ಹಿಂದಿನ ವೀಡಿಯೋ ಇದು ಎನ್ನಲಾಗಿದೆ. ರಾಶಿ ರಾಶಿ ಸ್ಮಾರ್ಟ್ಫೋನ್‌ಗಳು, ಬೀಡಿ-ಸಿಗರೇಟ್ ಪ್ಯಾಕೇಟ್‌ಗಳನ್ನ ಒಂದೇಡೆ ಹಾಕಿರುವ ವೀಡಿಯೋ ಕೂಡ ವೈರಲ್ ಆಗಿದೆ. ಜೈಲ್ ಅಧೀಕ್ಷಕಿಯನ್ನ ಟಾರ್ಗೆಟ್ ಮಾಡಿಕೊಂಡು ವೀಡಿಯೋ ರಿಲೀಸ್ ಮಾಡಲಾಗಿದೆ. ಜೈಲು ಮುಖ್ಯ ಅಧೀಕ್ಷಕಿಗೆ ಹಣ ನೀಡುವ ಕುರಿತು ಕೈದಿಗಳು ಮಾತುಕತೆ ನಡೆಸಿರುವುದು ಇದರಿಂದ ಬಹಿರಂಗಗೊಂಡಿದೆ.

ಅಧೀಕ್ಷಕಿಯ ವಿರುದ್ಧ ಸಿಬ್ಬಂದಿಗಳಿಂದಲೇ ಷಡ್ಯಂತ್ರ
ಇನ್ನು ಜೈಲು ಮುಖ್ಯ ಅಧೀಕ್ಷಕಿಯ ವಿರುದ್ಧ ಕೇಂದ್ರ ಕಾರಾಗೃಹದ ಸಿಬ್ಬಂದಿಗಳೇ ಷಡ್ಯಂತ್ರ ರೂಪಿಸಿದ್ದಾರೆ ಎಂಬ ಸ್ಪೋಟಕ ಅಮಶ ಮುನ್ನಲೆಗೆ ಬಂದಿದೆ. ಜೈಲಿನಲ್ಲೇ ಖೈದಿಗಳಿಗೆ ಬೆಂಬಲವಾಗಿ ನಿಲ್ಲುವ ಸಿಬ್ಬಂದಿ ವರ್ಗವಿದೆ ಅನ್ನೋ ಆರೋಪ ಇದೆ. ಈಗ ವೈರಲ್ ಆಗಿರುವ ವಿಡಿಯೋ ಕೂಡ ಸಿಬ್ಬಂದಿಗಳ ಕೈವಾಡದಿಂದಲೇ ನಡೆದಿದೆ ಎನ್ನಲಾಗಿದೆ. ಜೈಲಿನಲ್ಲಿಯೇ ಎರಡು ಬಣವಿದ್ದು, ಒಂದು ವರ್ಗ ಕ್ರಿಮಿನಲ್‌ಗಳಿಗೆ ಸಪೋರ್ಟ್ ಮಾಡಿ ಅನಿತಾ ಅವರ ದಕ್ಷ ಕಾರ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಮತ್ತೊಂದು ಬಣ ಅಧಿಕಾರಿಗೆ ಬೆನ್ನಲುಬಾಗಿ ನಿಂತಿದೆ. ಕಳೆದ ಹಲವು ವರ್ಷಗಳಿಂದ ಜೈಲು ಸಿಬ್ಬಂದಿಗಳು ವರ್ಗಾವಣೆ ಆಗದೇ ಇರುವುದೂ ಕೂಡ ಅನುಮಾನಕ್ಕೆ ಕಾರಣವಾಗಿದೆ.

ಭ್ರಷ್ಟಚಾರದಲ್ಲಿ ಕಾರಾಗೃಹದ ಸಿಬ್ಬಂದಿಗಳು..!
ಹೌದು, ಕೇಂದ್ರ ಕಾರಾಗೃಹದ ಸಿಬ್ಬಂದಿಗಳಿಗೂ ಅನಿತಾ ಅವರು ಭಯಹುಟ್ಟಿಸಿದ್ದರು. ಜೈಲಿನಲ್ಲಿ ನಡೆಯುವ ಅಕ್ರಮಕ್ಕೆ ಬ್ರೇಕ್ ಹಾಕಿದ್ದರು. ಜೈಲಿನಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರಕ್ಕೆ ಇತಿಶ್ರೀ ಹಾಡಲು ಮುಂದಾಗಿದ್ದರು. ಯಾವಾಗ ಸಿಬ್ಬಂದಿಗಳಿಗೆ ಭ್ರಷ್ಟಚಾರ ನಡೆಸಲು ತೊಡಕಾಯಿತೋ ಆವಾಗ ಪೊಲೀಸ್ ಸಿಬ್ಬಂದಿಗಳೇ, ಖೈದಿಗಳ ಜೊತೆ ಕೈ ಜೋಡಿಸಿದ್ದಾರೆ. ವಿಡಿಯೋ ವೈರಲ್ ಮಾಡಿರುವ ಹಿಂದೆಯೂ ಸಿಬ್ಬಂದಿಗಳ ಪಾತ್ರವಿದೆ ಅನ್ನೋ ಆರೋಪವಿದೆ.

ದಕ್ಷ ಮಹಿಳಾ ಅಧಿಕಾರಿಯ ವರ್ಚಸ್ಸಿಗೆ ಮಸಿ ಬಳಿಯುವ ಯತ್ನ
ಖಡಕ್ ಆಫೀಸರ್ ಆಗಿರುವ ಅನಿತಾ ಅವರ ವರ್ಚಸ್ಸಿಗೆ ಮಸಿ ಬಳಿಯುವ ಯತ್ನ ನಡೆದಿದೆ. ಜೈಲಿನಲ್ಲಿ ಖೈದಿಗಳು ಐಷರಾಮಿ ಜೀವನ ಸಾಗಿಸುತ್ತಿದ್ದಾರೆ ಅನ್ನೋದಕ್ಕೆ ವಿಡಿಯೋ ಹರಿಬಿಡಲಾಗಿತ್ತು. ಇವರ ಅಧಿಕಾರ ಅವಧಿಯಲ್ಲೇ ಹೀಗೆಲ್ಲಾ ನಡೆದಿದೆ ಅನ್ನುವ ಹಾಗೇ ಬಿಂಬಿಯುವ ಯತ್ನ ನಡೆದಿದೆ. ಹೀಗೆ ಮಾಡಿ ಜೈಲು ಅಧೀಕ್ಷಕಿಯ ಮೇಲೆ ಕಪ್ಪು ಚುಕ್ಕಿ ಬೀಳುವಂತೆ ಮಾಡಲಾಗಿದೆ. ದಕ್ಷ ಅಧಿಕಾರಿಯ ವರ್ಚಸ್ಸಿಗೆ ಮಸಿ ಬಳಿಯುವ ಯತ್ನ ನಡೆದಿದೆ.

ಕಾರು ಸ್ಫೋಟಿಸುವುದಾಗಿ ಬೆದರಿಕೆ – ಎಫ್‌ಐಆರ್ ದಾಖಲು
ಸೆರೆಮನೆಯಲ್ಲಿ ವಿವಿಧ ಕಾನೂನು ತಂದು, ಶಾಂತಿ ಕಾಪಾಡಲು ಯತ್ನಿಸಿದ ಮಹಿಳಾ ಅಧಿಕಾರಿಗೆ ಬೆದರಿಕೆ ಹಾಕಿದ್ದು ಇದೆ. ಮುಖ್ಯ ಅಧೀಕ್ಷಕಿ ಅನಿತಾ ಅವರ ಕಾರು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ ಆರೋಪದ ಮೇಲೆ ಇಬ್ಬರು ಮಹಿಳಾ ಕೈದಿಗಳು ಸೇರಿದಂತೆ ಒಟ್ಟು ಒಂಬತ್ತು ಕೈದಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಜೈಲು ಮುಖ್ಯ ಅಧೀಕ್ಷಕಿ ಅನಿತಾ ದೂರಿನ ಆಧಾರದ ಮೇಲೆ ಕೈದಿಗಳಾದ ಮುಸ್ತಫಾ, ನಸೀರ್, ಬಚ್ಚನ್, ಅಲ್ತಾಫ್ ಸೇರಿದಂತೆ ಒಂಭತ್ತು ಮಂದಿಯ ವಿರುದ್ಧ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಡಾ. ಅನೀತಾ ಅವರು ಮುಖ್ಯ ಅಧೀಕ್ಷಕಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಜೈಲಿನಲ್ಲಿನ ಗುಟ್ಕಾ, ಸಿಗರೇಟ್, ಗಾಂಜಾ, ಮೊಬೈಲ್, ಡಿಜಿಟಲ್ ವಸ್ತುಗಳು, ತಂಬಾಕು ಸೇರಿದಂತೆ ನಿಷೇಧಿತ ವಸ್ತುಗಳನ್ನು ಕಟ್ಟುನಿಟ್ಟಾಗಿ ಬ್ಯಾನ್ ಮಾಡಿದ್ದರು. ಇದನ್ನು ವಿರೋಧಿಸಿ 70ಕ್ಕೂ ಹೆಚ್ಚು ವಿಚಾರಣಾಧೀನ ಕೈದಿಗಳು ಜೈಲಿನಲ್ಲಿ ತಮಗೆ ಬೇಕಾದ ವಸ್ತುಗಳು ಸಿಗುತ್ತಿಲ್ಲ, ಸರಿಯಾದ ಊಟ ನೀಡುತ್ತಿಲ್ಲ, ಗುಟ್ಕಾ, ಸಿಗರೇಟ್ ಬೇಕು ಅಂತ ಪ್ರತಿಭಟನೆ ಮಾಡಿದ್ದರು.

ಒಟ್ಟಿನಲ್ಲಿ ಕಲಬುರಗಿ ಕೇಂದ್ರ ಕಾರಾಗೃಹ ವಿವಾದದ ಕೇಂದ್ರ ಬಿಂದುವಾಗಿದೆ. ಜೈಲಿನಲ್ಲೇ ಹೈಡ್ರಾಮಾ ನಡೆದಿದೆ. ದಕ್ಷ ಅಧಿಕಾರಿಗೆ ಬೆಂಬಲವಾಗಿ ನಿಲ್ಲಬೇಕಾಗಿದ್ದ ಸಿಬ್ಬಂದಿಗಳೇ ಉಲ್ಟ ಹೊಡೆದಿದ್ದಾರೆ. ಆದರೆ ಅದಕ್ಕೆಲ್ಲಾ ಅಂಜದೆ ತಮ್ಮ ಕಾರ್ಯವನ್ನು ಮುಂದುವರಿಸಿದ್ದಾರೆ. ಜೀವ ಬೆದರಿಕೆ ಹಾಕಿರುವದನ್ನು ಖಂಡಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕಾಗಿದೆ. ಖಡಕ್ ಮಹಿಳಾ ಆಫೀಸರ್ ಅವರಿಗೆ ಸೂಕ್ತ ರಕ್ಷಣೆ ಸಿಗಬೇಕಾಗಿದೆ. ಇವರ ಬೆಂಬಲಕ್ಕೆ ಸರ್ಕಾರ ನಿಲ್ಲಬೇಕಾಗಿದೆ. ಕೇಂದ್ರ ಕಾರಗೃಹದ ವಿವಾದಕ್ಕೆ ಬ್ರೇಕ್ ಬೀಳಬೇಕಾಗಿದೆ.

Related posts

Leave a Comment