
ಇನ್ಸ್ಟಾಗ್ರಾಂನಲ್ಲಿ ಪರಿಚಿತನಾದ ವ್ಯಕ್ತಿಯೊಬ್ಬ ಅಪ್ರಾಪ್ತ ಬಾಲಕಿಯ ಕತ್ತು ಸೀಳಿ, ಚಿನ್ನದ ಸರವನ್ನು ಕದ್ದೊಯ್ದಿರುವ ಘಟನೆ ತಮಿಳುನಾಡಿನ ಕೃಷ್ಣಾಪುರದಲ್ಲಿ ನಡೆದಿದೆ. ಆಕೆ 10ನೇ ತರಗತಿ ಓದುತ್ತಿದ್ದರೆ, ಆತ ದ್ವಿತೀಯ ಪಿಯುಸಿಯಲ್ಲಿ ಓದುತ್ತಿದ್ದ.
ಇನ್ಸ್ಟಾಗ್ರಾಂನಲ್ಲಿ ಬಾಲಕಿಯೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದ, ಆತನ ದಾಳಿಯಿಂದ ಅಂತಿಮವಾಗಿ ತಪ್ಪಿಸಿಕೊಂಡು ಮನೆಗೆ ತಲುಪಿದ್ದಾಳೆ. ಫೆಬ್ರವರಿ 23ರಂದು ರಾತ್ರಿ ಹುಡುಗ ಆಕೆಗೆ 10 ಗಂಟೆ ಸುಮಾರಿಗೆ ಮನೆಯಿಂದ ಹೊರಬರಲು ಸೂಚಿಸಿದ್ದ, ಆಕೆ ಹೊರಗೆ ಬಂದಾಗ ಅವಳ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ, ಹಲವು ಬಾರಿ ಕತ್ತಿಗೆ ಚಾಕುವಿನಿಂದ ಇರಿದಿದ್ದಾನೆ.
ಅಷ್ಟೇ ಅಲ್ಲದೆ 12 ಗ್ರಾಂ ಚಿನ್ನದ ಸರವನ್ನೂ ದೋಚಿ ಪರಾರಿಯಾಗಿದ್ದ. ಆ ನೋವಿನಲ್ಲೇ ಆಕೆ ಹೇಗೋ ಮನೆಗೆ ತಲುಪಿದ್ದಾಳೆ. ಆಕೆಯ ಸ್ಥಿತಿಯನ್ನು ನೋಡಿ ಪೋಷಕರು ಬೆಚ್ಚಿಬಿದ್ದಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆಕೆಯ ತಂದೆಯ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದಾರೆ. ಆತನ ಮೂವರು ಸ್ನೇಹಿತರನ್ನು ಸಹ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ.