
ದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ರೋಮಾಂಚಕಾರಿ ಖೋ ಖೋ ವಿಶ್ವಕಪ್ ಫೈನಲ್ ಪಂದ್ಯಗಳಲ್ಲಿ ನೇಪಾಳ ತಂಡವನ್ನು ಮಣಿಸಿ ಭಾರತದ ಪುರುಷರು, ಮಹಿಳೆಯರೂ ಇಬ್ಬರೂ ಟ್ರೋಫಿಗೆ ಮುತ್ತಿಕ್ಕಿದ್ದಾರೆ.
ಮೊದಲು ಮಹಿಳೆಯರ ಖೋಖೋ ಫೈನಲ್ ಪಂದ್ಯ ನಡೆಯಿತು. ಇದರಲ್ಲಿ ನೇಪಾಳವನ್ನು 78-40 ಅಂಕಗಳಿಂದ ಭಾರತದ ಮಹಿಳಾ ತಂಡ ಸೋಲಿಸಿದೆ. ಈ ಮೂಲಕ ಚೊಚ್ಚಲ ಖೋ ಖೋ ವಿಶ್ವಕಪ್‌ಗೆ ಮುತ್ತಿಕ್ಕುವ ಮೂಲಕ ಭಾರತ ತಂಡ ಅಮೋಘ ಸಾಧನೆ ಮಾಡಿದೆ. ಇನ್ನು ಭಾರತದ ಪರ ಮೊದಲು ದಾಳಿಗೆ ಮುಂದಾದ ಪ್ರಿಯಾಂಕಾ ಇಂಗಲ್ ಭಾರತಕ್ಕೆ ಮೊದಲ ಸರದಿಯಲ್ಲಿ ಸ್ಫೋಟಕ ಆರಂಭ ಒದಗಿಸಿದರು.
ಮೊದಲ ಹಂತದಲ್ಲೇ ಉತ್ತಮ ಪರ್ಫಾಮೆನ್ಸ್ನಿಂದ 34-0 ದಿಂದ ಮುನ್ನಡೆ ಸಾಧಿಸಿತ್ತು. ಕೊನೆವರೆಗೂ ನೇಪಾಳ ಭಾರತದ ಅಂಕ ತಲುಪಲು ಆಗಲೇ ಇಲ್ಲ. ಅದರಲ್ಲಿ ಭಾರತೀಯ ನಾಯಕಿಯ ಪರ್ಫಾಮೆನ್ಸ್ನಿಂದ ತಂಡ ಗೆಲುವಿನ ನಗೆ ಬೀರಿತು. ಖೋ ಖೋ ಆಟದ ಮೊಟ್ಟ ಮೊದಲ ಫೈನಲ್ ಆಟದಲ್ಲೇ ಭಾರತ ವಿಜಯ ಮಾಲೆ ಧರಿಸಿ ಇತಿಹಾಸ ಬರೆದಿದೆ.
ಮಹಿಳೆಯರು ಟ್ರೋಫಿ ಜಯಿಸಿದ ಬೆನ್ನಲ್ಲೇ ಭಾರತದ ಖೋ ಖೋ ಪುರುಷರ ತಂಡ ಕಪ್ ಗೆದ್ದುಕೊಂಡಿದೆ. ಭಾರತದ ಪುರುಷರ ತಂಡ, ನೇಪಾಳ ಟೀಮ್ ಅನ್ನು 54-36 ಪಾಯಿಂಟ್ಸ್ನಿಂದ ಮಣಿಸಿ ಗೆಲುವು ಪಡೆದಿದೆ.
ಫೈನಲ್ ಪಂದ್ಯದಲ್ಲಿ ನಾಯಕ ಪ್ರತೀಕ್ ವೈಕರ್ ಮತ್ತು ಸ್ಟಾರ್ ಆಟಗಾರ ರಾಮ್‌ಜಿ ಕಶ್ಯಪ್ ಅವರ ಅಸಾಧಾರಣ ಆಟದಿಂದ ಭಾರತ ತಂಡ ಉತ್ತಮ ಪ್ರದರ್ಶನ ನೀಡಿತು. ರಾಮ್‌ಜಿ ಕಶ್ಯಪ್ ಅವರ ಸ್ಕೈ ಡೈವ್ಗಳ ನೆರವಿನಿಂದ ಭಾರತ ಆರಂಭದಲ್ಲೇ 4 ನಿಮಿಷದಲ್ಲಿ 10 ಪಾಯಿಂಟ್ ಕಲೆ ಹಾಕಿತ್ತು. ಹೀಗಾಗಿ ಇದೇ ಅಂತರ ಕಾಯ್ದುಕೊಂಡ ಟೀಮ್ ಇಂಡಿಯಾ ಕೊನೆಗೆ 54-36 ಪಾಯಿಂಟ್ಸ್ನಿಂದ ಜಯ ಸಾಧಿಸಿತು.