ಸಾಲ ನೀಡಿದ್ದ ಸ್ವಸಹಾಯ ಸಂಘದ ಪ್ರತಿನಿಧಿಗಳಿಂದ ಉಂಟಾದ ಕಿರುಕುಳದಿಂದ ಬೇಸತ್ತ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣವೊಂದು ಮಂಡ್ಯದ ಮಳವಳ್ಳಿ ತಾಲೂಕಿನ ಮಲಿಯೂರು ಗ್ರಾಮದಿಂದ ವರದಿಯಾಗಿದೆ.
ಈ ಗ್ರಾಮದ ಮಲ್ಲು ಎಂಬುವರ ಪತ್ನಿಯಾದ 35 ವರ್ಷದ ಮಹಾಲಕ್ಷ್ಮಿ ಸಾಲಭಾದೆಯಿಂದ ಆತ್ಮಹತ್ಯೆಗೆ ಶರಣಾದ ಮಹಿಳೆ. ಮೃತ ಮಹಾಲಕ್ಷ್ಮಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿAದ 2 ಲಕ್ಷ ರೂ ಸಾಲ ಪಡೆದಿದ್ದು ಪ್ರತೀ ವಾರ 1700 ಸಾಲದ ಕಂತು ಪಾವತಿಸುತ್ತಿದ್ದರು ಎನ್ನಲಾಗಿದೆ.
ಅದೇ ರೀತಿ ಬುಧವಾರ ಸಾಲದ ಕಂತನ್ನು ಕಟ್ಟಬೇಕಿದ್ದು ಹಣ ಹೊಂದಿಸಲು ನಾನು ಹೊರಗೆ ಹೋಗಿದ್ದ ವೇಳೆ ಬೆಳಿಗ್ಗೆ 11 ಗಂಟೆ ಸಮಯದಲ್ಲಿ ಮನೆ ಬಳಿ ಬಂದ ಸಂಸ್ಥೆಯ ಪ್ರತಿನಿಧಿ ಕೂಡಲೇ ಹಣ ಕಟ್ಟಿ ನಿನ್ನ ಗಂಡ ಬರುವವರೆಗೂ ಕಾಯಲಾಗದು ಕಟ್ಟಲಾಗದಿದ್ದರೆ ಸಾಲ ಏಕೆ ತೆಗೆದುಕೊಂಡಿರಿ ನೇಣು ಹಾಕಿಕೊಳ್ಳಿ ಎಂದು ಹೀಯಾಳಿಸಿದ್ದಾರೆ ಎಂದು ಪತಿ ಮಲ್ಲು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಇದರಿಂದ ಬೇಸತ್ತ ಮಹಾಲಕ್ಷ್ಮಿ ಸೆ. 18ರ ಬೆಳಿಗ್ಗೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಮೃತಳ ಪತಿ ನೀಡಿದ ದೂರಿನ ಮೇರೆಗೆ ಕಿರುಗಾವಲು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.