ಮನೆ ಎದುರು ಬೆಳಿಗ್ಗೆ ಕಸ ಗುಡಿಸುತ್ತಿರುವಾಗ ಹೆಜ್ಜೇನಿನ ಹಿಂಡು ದಿಢೀರನೆ ದಾಳಿ ನಡೆಸಿದ ಘಟನೆ ವರದಿಯಾಗಿದೆ. ಭಟ್ಕಳ ತಾಲೂಕಿನ ಜಾಲಿಕೋಡಿಯಲ್ಲಿ ಮಹಿಳೆಯೊಬ್ಬರು ಜೇನು ಕಡಿತಕ್ಕೆ ಒಳಗಾಗಿ ಗಂಭೀರ ಗಾಯಗೊಂಡಿದ್ದಾರೆ.
ಮಾಸ್ತಮ್ಮ ಮಂಜಪ್ಪ ನಾಯ್ಕ ಎಂಬ ಮಹಿಳೆ ತಮ್ಮ ಮನೆಯ ಎದುರು ಬೆಳಿಗ್ಗೆ ಕಸ ಗುಡಿಸುತ್ತಿರುವಾಗ ಹೆಜ್ಜೇನು ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಮಹಿಳೆ ಕೂಗಿಕೊಂಡಿದ್ದಾರೆ. ಮಗ ಮತ್ತು ಸೊಸೆ ಮಹಿಳೆಯ ಸಹಾಯಕ್ಕೆ ಧಾವಿಸಿದ್ದು ಅವರು ಕೂಡ ಜೇನು ನೊಣಗಳ ಕಡಿತಕ್ಕೆ ಒಳಗಾಗಿದ್ದಾರೆ.
ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ಧಾವಿಸಿ ಮಹಿಳೆಯನ್ನು ರಕ್ಷಿಸಿ ತಾಲೂಕು ಆಸ್ಪತ್ರೆಗೆ ಕರೆತಂದಿದ್ದು, ಮಹಿಳೆಗೆ ತೀವ್ರನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಆಕೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ. ಮಹಿಳೆಯ ಮಗ ಹಾಗೂ ಸೊಸೆ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.