ಬಂಟ್ವಾಳ: ತಂಡವೊಂದು ಇಬ್ಬರು ಯುವಕರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಗಾಯಗೊಳಿಸಿದ ಘಟನೆ ಪುದು ಗ್ರಾಮದ ಅಮ್ಮೆಮಾರ್ ಎಂಬಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.
ಪ್ರಕರಣದಲ್ಲಿ ತಸ್ಲೀಮ್ ಹಾಗೂ ಮಹಮ್ಮದ್ ಶಾಕಿರ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೂರ್ವ ದ್ಚೇಷದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದೆ ಎನ್ನಲಾಗಿದ್ದು, ಸ್ಥಳೀಯ ನಿವಾಸಿಗಳಾದ ಮನ್ಸೂರ್, ಪಲ್ಟಿ ಇಮ್ರಾನ್, ಮುಸ್ತಾಕ್ ಯಾನೆ ಮಿಚ್ಚ, ಶರ್ಫುದ್ದೀನ್, ಅಶ್ರಫ್, ರಿಝ್ವಾನ್, ಸಫ್ವಾನ್, ಅದ್ನಾನ್, ನಿಸಾಕ್, ಯಾಸಿರ್, ಸುಹೈಲ್, ಜಾಹೀದ್, ಸಾದಿಕ್, ಲತೀಫ್ ಎಂಬವರು ಹಲ್ಲೆ ಆರೋಪಿಗಳೆಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಆರೋಪಿಗಳು ತಸ್ಲೀಮ್ ಗೆ ಫೋನ್ ಕರೆ ಮಾಡಿ ಅವಾಚ್ಯವಾಗಿ ನಿಂದಿಸಿ ಅಮ್ಮೆಮಾರ್ ಶಾಲೆ ಬಳಿ ಬರುವಂತೆ ಸವಾಲು ಹಾಕಿದ್ದರೆನ್ನಲಾಗಿದೆ. ಅದರಂತೆ ತಸ್ಲೀಮ್ ಅಲ್ಲಿಗೆ ಶಾಕಿರ್ ಜೊತೆ ತೆರಳಿದಾಗ ದುಷ್ಕರ್ಮಿಗಳು ಮಾರಕಾಯುಧಗಳಿಂದ ದಾಳಿ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.