ಮಹಾ ಕುಂಭಮೇಳದ ತ್ರಿವೇಣಿ ಸಂಗಮದ ನೀರಿನ ಶುದ್ಧತೆ ಬಗ್ಗೆ ವ್ಯಾಪಕ ಟೀಕೆಗೆ ಕಾರಣವಾಗಿತ್ತು. ಈ ಮಧ್ಯೆ ಗಂಗಾ ನೀರು ಶುದ್ದವಾಗಿದೆ, ಸ್ನಾನಕ್ಕೆ ಸುರಕ್ಷಿತವಾಗಿದೆ. ಅಲ್ಲದೆ ಚರ್ಮ ರೋಗಗಳು ಕೂಡ ಬರುವುದಿಲ್ಲ ಎಂದು ಪದ್ಮಶ್ರೀ ಪುರಸ್ಕೃತ ವಿಜ್ಞಾನಿ ಡಾ.ಅಜಯ್ ಸೋಂಕರ್ ಹೇಳಿದ್ದಾರೆ.
ಸಂಗಮ್ ಮತ್ತು ಅರೈಲ್ ಸೇರಿದಂತೆ ಐದು ಘಾಟ್‌ಗಳಿಂದ ಗಂಗಾ ನೀರಿನ ಪ್ರಯೋಗಾಲಯ ಪರೀಕ್ಷೆಯ ನಂತರ ಅವರು ಈ ಹೇಳಿಕೆ ನೀಡಿದ್ದಾರೆ. ಐದು ಘಾಟ್‌ಗಳಿಂದ ಗಂಗಾ ನೀರಿನ ಮಾದರಿಗಳನ್ನು ತೆಗೆದುಕೊಂಡು ಪ್ರಯೋಗಾಲಯದಲ್ಲಿ ಸೂಕ್ಷ್ಮ ಪರೀಕ್ಷೆಗಳನ್ನು ನಡೆಸಲಾಗಿದೆ.
ಈ ಅವಧಿಯಲ್ಲಿ ಕೋಟ್ಯಂತರ ಭಕ್ತರು ಸ್ನಾನ ಮಾಡಿದರೂ ನೀರಿನಲ್ಲಿ ಬ್ಯಾಕ್ಟೀರಿಯಾದ ಬೆಳವಣಿಗೆಯಾಗಲಿ ಅಥವಾ ನೀರಿನ pH ಮಟ್ಟದಲ್ಲಿ ಯಾವುದೇ ಇಳಿಕೆಯಾಗಲಿ ಕಂಡುಬಂದಿಲ್ಲ. ಈ ಸಂಶೋಧನೆಯಲ್ಲಿ ಗಂಗಾ ನೀರಿನಲ್ಲಿ 1100 ವಿಧದ ಬ್ಯಾಕ್ಟೀರಿಯೊ ಫೇಜ್‌ಗಳು ಇರುವುದು ಕಂಡುಬಂದಿದೆ. ಇದು ಹಾನಿಕಾರಕ ಬ್ಯಾಕ್ಟೀರಿಯಾವನ್ನು ನಾಶಪಡಿಸುತ್ತದೆ. ಇದರಿಂದಾಗಿ ನೀರು ಕಲುಷಿತವಾಗಲಿಲ್ಲ ಎಂದು ಹೇಳಿದ್ದಾರೆ.
ತಮ್ಮ ಪ್ರಯೋಗಾಲಯದಲ್ಲಿ ಗಂಗಾ ನೀರನ್ನು ಪರೀಕ್ಷಿಸಿರುವುದಾಗಿ ಹೇಳಿರುವ ಅವರು, ಗಂಗಾ ನೀರಿನ ಶುದ್ಧತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತುವವರು ಅದನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಲಿ. ಯಾರಿಗಾದರೂ ಸಂದೇಹವಿದ್ದರೆ, ನನ್ನ ಮುಂದೆ ಗಂಗಾಜಲವನ್ನು ತೆಗೆದುಕೊಂಡು ನಮ್ಮ ಪ್ರಯೋಗಾಲಯದಲ್ಲಿ ಪರೀಕ್ಷಿಸಿ ತೃಪ್ತಿಪಡಿಸಿಕೊಳ್ಳಬೇಕು ಎಂದಿದ್ದಾರೆ.
ಮೂರು ತಿಂಗಳ ನಿರಂತರ ಸಂಶೋಧನೆಯ ನಂತರವೂ ಗಂಗಾ ಜಲವು ಅತ್ಯಂತ ಶುದ್ಧವಾದುದು ಎಂದು ಸಾಬೀತುಪಡಿಸಿದೆ ಇಲ್ಲಿ ಸ್ನಾನ ಮಾಡುವುದರಿಂದ ಯಾವುದೇ ರೀತಿಯ ಹಾನಿ ಉಂಟಾಗುವುದಿಲ್ಲ. ಬ್ಯಾಕ್ಟೀರಿಯೊಫೇಜ್ (ಬ್ಯಾಕ್ಟೀರಿಯಾ ಭಕ್ಷಕ)ದಿಂದಾಗಿ ಗಂಗಾ ನೀರಿನ ಶುದ್ಧತೆ ಹಾಗೆಯೇ ಉಳಿದಿದೆ. ನೀರಿನ ಮಾದರಿಗಳನ್ನು ಪ್ರಯೋಗಾಲಯದಲ್ಲಿ 14 ಗಂಟೆಗಳ ಕಾಲ ಕಾವು ತಾಪಮಾನದಲ್ಲಿ ಇಟ್ಟ ನಂತರವೂ ಗಂಗಾ ನೀರು ಸ್ನಾನಕ್ಕೆ ಸುರಕ್ಷಿತ ಮಾತ್ರವಲ್ಲ, ಅದರ ಸಂಪರ್ಕಕ್ಕೆ ಬರುವುದರಿಂದ ಚರ್ಮ ರೋಗಗಳು ಕೂಡ ಬರುವುದಿಲ್ಲ ಎಂದು ಹೇಳಿದ್ದಾರೆ. ಡಾ. ಅಜಯ್ ಕುಮಾರ್ ಸೋಂಕರ್ ಅವರು ಪ್ರಯಾಗರಾಜ್‌ನ ನೈನಿ ನಿವಾಸಿಯಾಗಿದ್ದು, ಸ್ವತಂತ್ರ ಸಂಶೋಧಕರು ಮತ್ತು ಉನ್ನತ ವಿಜ್ಞಾನಿಯಾಗಿದ್ದಾರೆ. ಕೇಂದ್ರ ಸರ್ಕಾರ ಇತ್ತಿಚೇಗೆ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿತ್ತು.
