ಉಡುಪಿಯಲ್ಲಿ ಇತ್ತೀಚೆಗೆ ನಡೆದ ವಿಶ್ವಾರ್ಪಣಂ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಡೆಹ್ರಾಡೂನ್‌ನ ಚಿಂತಕಿ ಮೀನಾಕ್ಷಿ ಸೆಹರಾವತ್ ಹಾಗೂ ಕಾರ್ಯಕ್ರಮದ ಆಯೋಜಕರ ಮೇಲೆ ಉಡುಪಿ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ ಘಟನೆ ನಡೆದಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಉಡುಪಿಯ ಅದಮಾರು ಮಠದ ಕಿರಿಯ ಶ್ರೀಗಳಾದ ಶ್ರೀ ಶ್ರೀ ಈಶಪ್ರಿಯ ತೀರ್ಥರ ನೇತೃತ್ವದಲ್ಲಿ ನಡೆದ ವಿಶ್ವಾರ್ಪಣಂ ಕಾರ್ಯಕ್ರಮ ಈಗ ಹಿಂದೂ ವಿರೋಧಿಗಳ ನಿದ್ದೆ ಕೆಡಿಸಿದೆ. ವಿಶ್ವಾರ್ಪಣಂ ಕಾರ್ಯಕ್ರಮದಲ್ಲಿ ಉತ್ತರ ಭಾರತದ ಖ್ಯಾತ ಚಿಂತಕಿ ಮೀನಾಕ್ಷಿ ಶರಾವತ್ ಅವರ ಉಡುಪಿಯ ಪೊಲೀಸರು ಸುಮೋಟೋ ಕೇಸು ದಾಖಲಿಸಿದ್ದಾರೆ. ಜೊತೆಗೆ ಈ ಕಾರ್ಯಕ್ರಮದ ಪ್ರಮುಖ ಆಯೋಜಕರಾಗಿರುವ ಗೋವಿಂದರಾಜ್ ಅವರ ಮೇಲೂ ದುರುದ್ದೇಶದಿಂದ ಕೇಸು ಮಾಡಿದ್ದಾರೆ. ಮುಂದೆ ಯಾವತ್ತೂ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡಬಾರದು ಎನ್ನುವುದು ಪೊಲೀಸರ ಉದ್ದೇಶವಾಗಿದೆ ಎಂದು ಆಕ್ರೋಶ ಕೇಳಿಬಂದಿದೆ.
ಮೀನಾಕ್ಷಿ ಸೆಹರಾವತ್ ಅವರು ಈ ಕಾರ್ಯಕ್ರಮದಲ್ಲಿ ಗಾಂಧೀಜಿ ರಾಷ್ಟ್ರಪಿತ ಆಗಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಈ ಮಾತನ್ನು ಈ ಹಿಂದೆಯೂ ಕೂಡ ಅನೇಕ ಜನರು ಹೇಳಿರುತ್ತಾರೆ. ಬಾಂಗ್ಲಾದೇಶದ ಇಂದಿನ ದುಸ್ಥಿತಿಗೆ ಗಾಂಧೀಜಿ ಅವರು ಅಂದು ಮಾಡಿರುವ ಕೆಲವು ರಾಜಕೀಯ ತಪ್ಪು ನಿರ್ಣಯಗಳೇ ಕಾರಣ ಎಂದು ಅವರು ಟೀಕಿಸಿದ್ದರು. ಅಲ್ಲದೆ ಹಿಂದೂ ಸಮಾಜ ಬಾಂಗ್ಲಾ ರೀತಿಯ ದುಸ್ಥಿತಿ ಇಲ್ಲಿ ಬರದಂತೆ ಮೊದಲೇ ಎಚ್ಚರಿಕೆ ವಹಿಸಬೇಕು ಎಂದು ಕಿವಿಮಾತು ಹೇಳಿದ್ದರು. ಗಾಂಧಿ ಅವರು ಜಿನ್ನಾ ಜೊತೆಗೆ ಸೇರಿಕೊಂಡು ಪಾಕಿಸ್ತಾನಕ್ಕೆ ಜನ್ಮ ನೀಡಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದರು.
ದೇಶದ ಬೇರೆ ಬೇರೆ ಧರ್ಮದ, ಗುಂಪುಗಳ ನಡುವೆ ವೈಮನಸ್ಸು ಹಾಗೂ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ರೀತಿಯಲ್ಲಿ ಮೀನಾಕ್ಷಿ ಅವರು ಪ್ರಚೋದನಕಾರಿಯಾಗಿ ಭಾಷಣ ಮಾಡಿದ್ದಾರೆ ಎಂಬುದು ಎಫ್‌ಐಆರ್‌ನಲ್ಲಿದೆ. ಹಿಂದುತ್ವದ ವಿಚಾರ ಮಾತನಾಡುವವರು ಕೋಮು ಸಾಮರಸ್ಯವನ್ನು ಕದಡುತ್ತಿದ್ದಾರೆ ಎನ್ನುವುದು ಪೊಲೀಸರ ಆರೋಪವಾಗಿದೆ. ಪೊಲೀಸರು ಇವರಿಬ್ಬರ ಮೇಲೆ 353/2ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ಇದು ಜಾಮೀನು ರಹಿತ ಕೇಸ್ ಆಗಿರುತ್ತದೆ.
ಹಿಂದೂ ಸಮಾಜದ ಐಕ್ಯತೆಗಾಗಿ ಕರೆ ನೀಡಿದ್ದ ಮೀನಾಕ್ಷಿ ಸೆಹರಾವತ್ ಮತ್ತು ಕಾರ್ಯಕ್ರಮದ ಆಯೋಜಕ ಗೋವಿಂದರಾಜ್ ಅವರ ಮೇಲೆ ಪ್ರಕರಣ ದಾಖಲಿಸುವ ಮೂಲಕ ಪೊಲೀಸ್ ಇಲಾಖೆ ತನ್ನ ಹಿಂದೂ ವಿರೋಧಿ ನೀತಿಯನ್ನು ಬಹಿರಂಗವಾಗಿ ತೋರ್ಪಡಿಸಿದೆ. ಪರಮ ಪೂಜ್ಯ ಅದಮಾರು ಶ್ರೀಗಳು ಈಗಾಗಲೇ ಸಾವಯವ ಕೃಷಿ, ಸ್ವದೇಶಿ ಚಿಂತನೆ ಮತ್ತು ಹಿಂದುತ್ವದ ಬಗ್ಗೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ ಸಮಾಜವನ್ನು ಜಾಗೃತಿಗೊಳಿಸುತ್ತಿದ್ದಾರೆ.
“ಈ ಕಾರ್ಯಕ್ರಮಗಳಿಗೆ ಕಡಿವಾಣ ಹಾಕುವ ಪ್ರಯತ್ನವಾಗಿ ಈಗ ಈ ಸುಳ್ಳು ಪ್ರಕರಣಗಳು ದಾಖಲಾಗಿವೆ. ಆದರೆ ಕೇಸುಗಳಿಗೆ ಹೆದರಿ ಸಾಮಾಜಿಕ ಕಾರ್ಯಗಳನ್ನು ನಿಲ್ಲಿಸುವ ಜಾಯಮಾನ ಅದಮಾರು ಮಠಾಧೀಶರದ್ದಲ್ಲ. ಪೊಲೀಸರ ಈ ಪಕ್ಷಪಾತ ಧೋರಣೆಯ ವಿರುದ್ಧ ನ್ಯಾಯಾಲಯದಲ್ಲಿ ಸಂಘರ್ಷ ನಡೆಸಲು ಶ್ರೀ ಮಠವು ನಿರ್ಧರಿಸಿರುತ್ತದೆ. ಮಠದ ಅಪಾರ ಭಕ್ತ ಕೋಟಿ ಜನರು ಬಲವಾಗಿ ನಿಂತು ಈ ಅನ್ಯಾಯದ ವಿರುದ್ಧ ಧ್ವನಿ ಎತ್ತಲಿದ್ದಾರೆ” ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.
“ಇದು ಕೇವಲ ಇಬ್ಬರೂ ವ್ಯಕ್ತಿಗಳ ವಿರುದ್ಧ ದಾಖಲಾದ ಪ್ರಕರಣವಾಗಿರದೆ ಹಿಂದೂ ಸಮಾಜದ ಅಭಿವ್ಯಕ್ತಿ ಸ್ವಾತಂತ್ರವನ್ನು ಹರಣ ಮಾಡುವ ಪ್ರಯತ್ನವಾಗಿರುತ್ತದೆ. ಸುಮೊಟೊ ಕೇಸುಗಳನ್ನು ಜಡಿಯುವ ಮೂಲಕ ಹಿಂದೂ ಭಾವನೆಗಳನ್ನು ಹತ್ತಿಕ್ಕಬಹುದು ಎಂಬ ಭ್ರಮೆ ಪೊಲೀಸರಿಗೆ ಇದ್ದರೆ ಅದನ್ನು ಈಗಲೇ ಬಿಟ್ಟುಬಿಡುವುದು ಒಳ್ಳೆಯದು. ಏಕೆಂದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ತೀಕ್ಷ್ಣವಾಗಿ ಭಾರತೀಯ ರಾಷ್ಟ್ರೀಯ ವಿಚಾರಗಳು ಮತ್ತು ಹಿಂದೂ ಧರ್ಮದ ವಿಚಾರಗಳನ್ನ ವಿಶ್ವಾರ್ಪಣಂ ವೇದಿಕೆ ಪ್ರತಿಪಾದಿಸಲಿದೆ” ಎಂದು ತಿಳಿಸಿದ್ದಾರೆ.
