
ಮುಖ್ಯಮಂತ್ರಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಜಿಲ್ಲಾಧಿಕಾರಿಗಳು ಮತ್ತು ಹಿರಿಯ ಅಧಿಕಾರಿಗಳ ಹೆಸರು ಹಾಗೂ ಸಹಿ ನಕಲು ಮಾಡಿ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಹಣ ಪಡೆದು ವಂಚಿಸುತ್ತಿದ್ದ ಆರೋಪಿಯನ್ನು ಮಂಡ್ಯ ಪೂರ್ವ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಂಡ್ಯ ನಗರದ ತಾವರೆಗೆರೆ ನಿವಾಸಿ ಹೆಚ್.ಸಿ.ವೆಂಕಟೇಶ್ ಬಂಧಿತ ಆರೋಪಿ.
ಆರೋಪಿ ಹೆಚ್.ಸಿ.ವೆಂಕಟೇಶ್ ಸರ್ಕಾರಿ ಅಧಿಕಾರಿ ಎಂದು ಹೇಳಿಕೊಂಡು ಕೆಲಸ ಕೊಡಿಸುವುದಾಗಿ ನಂಬಿಸಿ ಎರಡು ಕೋಟಿ ರೂಪಾಯಿಗೂ ಅಧಿಕ ಹಣ ಸುಲಿಗೆ ಮಾಡಿದ್ದನು. ಹಣ ನೀಡಿದ ಬಳಿಕ, ನಕಲಿ ನೇಮಕಾತಿ ಪತ್ರವನ್ನು ಸಂತ್ರಸ್ತರಿಗೆ ನೀಡುತ್ತಿದ್ದನು. ಅಬಕಾರಿ ಇಲಾಖೆಯಲ್ಲಿ ಚಾಲಕ ಹುದ್ದೆ ಕೊಡಿಸುತ್ತೇನೆಂದು ಓರ್ವರಿಂದ ನಕಲಿ ದಾಖಲೆ ಸೃಷ್ಟಿಸಿ ಮೂವರಿಂದ 45 ಲಕ್ಷ ರೂ. ಪಡೆದು ವಂಚಿಸಿದ್ದಾನೆ.
ಆರೋಪಿ ವೆಂಕಟೇಶ್ ವಿರುದ್ಧ ಮಂಡ್ಯ ಪೂರ್ವ ಠಾಣೆಯಲ್ಲಿ ಪ್ರತ್ಯೇಕ 3 ಪ್ರಕರಣ ದಾಖಲಾಗಿವೆ. 316(2), 318(4), 336(3), 61, 351(2), 3(5) ಅಡಿ ಪ್ರಕರಣ ದಾಖಲಾಗಿವೆ.
ಆರೋಪಿ ವೆಂಕಟೇಶ್ ಬಳಿ ಇದ್ದ ಕೆಪಿಎಸ್ಸಿ, ಅಬಕಾರಿ, ವಾಣಿಜ್ಯ ತೆರಿಗೆ, ನಗರಾಭಿವೃದ್ಧಿ ಇಲಾಖೆ, ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಪತ್ರ ಸ್ಥಳ ನಿಯೋಜಿಸಿ ಆದೇಶ ಹೊರಡಿಸಿರುವ ನಕಲಿ ನೇಮಕಾತಿ ಪತ್ರಗಳು, ದಾಖಲೆಗಳು, ಹಾಜರಾತಿ ಪುಸ್ತಕಗಳು, ಸರ್ಕಾರದ ಲೋಗೋ, ನಕಲಿ ಐಡಿ ಕಾರ್ಡ್, ಟ್ಯಾಗ್ಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ವೆಂಕಟೇಶ್ ವಿವಿಧ ಇಲಾಖೆಗಳ ನಕಲಿ ಲೆಟರ್ ಹೆಡ್, ಸೀಲು, ಅಧಿಕಾರಿಗಳ ಸಹಿ ಕೂಡ ನಕಲು ಮಾಡುತ್ತಿದ್ದನು.