ಉಡುಪಿ ಜಿಲ್ಲೆಯ ಕೋಟ ಪೊಲೀಸ್ ಠಾಣಾ ಎಸ್ ಐ, ಗುರುನಾಥ ಹಾದಿಮನಿ ಅವರನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಅರುಣ್. ಕೆ ಆದೇಶ ಮಾಡಿದ್ದಾರೆ.
ಅಕ್ರಮ ಮರಳುಗಾರಿಕೆ ಪ್ರಕರಣವೊಂದರ ಸಂಬಂಧ ವರಿಷ್ಠಾಧಿಕಾರಿಗಳು, ಅಮಾನತು ಆದೇಶ ಮಾಡಿದ್ದಾರೆ. ಉಡುಪಿಗೆ ಡಾ. ಅರುಣ್ ಅವರು, ವರಿಷ್ಠಾಧಿಕಾರಿಯಾದ ನಂತರ ಇಲಾಖೆಯಲ್ಲಿ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳನ್ನು ಸತತ ಅಮಾನತು ಮಾಡಲಾಗುತ್ತಿದೆ.
ಈಗಾಗಲೇ 4 ಮಂದಿ ಎಸ್‌ಐಗಳು ಸಹಿತ 80 ಕ್ಕೂ ಅಧಿಕ ಸಿಬಂದಿಗಳು ಅಮಾನತುಗೊಂಡಿದ್ದಾರೆ. ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕರ್ತವ್ಯದಲ್ಲಿದ್ದ 4 ಮಂದಿ ಎಸ್‌ಐಗಳಾದ ಗುರುನಾಥ ಹಾದಿಮನೆ, ಶಂಭುಲಿಂಗ, ಅಶೋಕ್, ಸುಷ್ಮಾ ಅವರನ್ನು ಅಮಾನತು ಮಾಡಲಾಗಿದೆ.
ಈ ಪೈಕೆ ಕೆಲವು ಮಂದಿಯ ಅಮಾನತು ಆದೇಶ ಮುಕ್ತಾಯಗೊಂಡಿದ್ದು, ಹಿಂದೆ ಸೇವೆ ಸಲ್ಲಿಸುತ್ತಿದ್ದ ಠಾಣೆ ಬಿಟ್ಟು ಬೇರೆ ಠಾಣೆಗಳಲ್ಲಿ ಕರ್ತವ್ಯ ಸಲ್ಲಿಸುತ್ತಿದ್ದಾರೆ.
ಪೊಲೀಸ್ ಕರ್ತವ್ಯ ಹೊರತುಪಡಿಸಿ ಇತರ ಕರ್ತವ್ಯ ನಡೆಸಿ ಇಲಾಖಾ ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಕೆಲವರ ಮೇಲೆ ಈಗಾಗಲೇ ಶಿಸ್ತು ಕ್ರಮ ತೆಗೆದುಕೊಳ್ಳಲಾಗಿದೆ. ಈ ಪ್ರಕ್ರಿಯೆ ನಿರಂತರ ಜಾರಿಯಲ್ಲಿರಲಿದೆ. ಪೊಲೀಸರು ಕಾನೂನು ಸುವ್ಯವಸ್ಥೆಗೆ ಒತ್ತು ನೀಡುವ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಎಸ್ ಪಿ ಮಾಹಿತಿ ನೀಡಿದ್ದಾರೆ.