ದಿನನಿತ್ಯ ಮನೆಗೆ ಬೇಕಾಗುವ ವಸ್ತುಗಳು ಗುಣಮಟ್ಟದ್ದಾಗಿರಲಿ ಎಂದು ಜನ ಬ್ರಾಂಡೆಡ್ ಕಂಪನಿ ವಸ್ತುಗಳನ್ನೇ ಖರೀದಿ ಮಾಡುತ್ತಾರೆ. ಆದರೆ, ಕೆಲವು ನಕಲಿ ವೀರರು ಬ್ರಾಂಡೆಡ್ ಉತ್ಪನ್ನಗಳನ್ನೇ ಹೋಲುವಂತೆ ನಕಲಿ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುವ ಮೂಲಕ ವಂಚಿಸುತ್ತಿರುವುದು ಬಯಲಾಗಿದೆ.
ಬೆಂಗಳೂರಿನ ಕಾಟನ್ ಪೇಟೆಯಲ್ಲಿ ನಕಲಿ ಸರ್ಫ್ ಎಕ್ಸೆಲ್, ರಿನ್, ವ್ಹೀಲ್, ಏರಿಯಲ್, ಟೈಡ್, ಗುಡ್ ನೈಟ್ ಮತ್ತು ಆಲ್ ಔಟ್ ಸೇರಿ ಪ್ರತಿಷ್ಠಿತ ಕಂಪನಿಗಳ ಉತ್ಪನ್ನಗಳನ್ನ ನಕಲು ಮಾಡಿ ದೊಡ್ಡ ಮಟ್ಟದಲ್ಲಿ ಮಾರಾಟ ಮಾಡುವ ಜಾಲ ಬೆಳಕಿಗೆ ಬಂದಿದೆ. ಈ ದೂರು ಆಧರಿಸಿ ಸಿಸಿಬಿ ಅಧಿಕಾರಿಗಳು ಗೋಡೌನ್ ಮತ್ತು ಮಾದನಾಯಕನಹಳ್ಳಿ ಠಾಣವ್ಯಾಪ್ತಿಯ ಕಾಚೋಹಳ್ಳಿಯ ಕಾರ್ಖಾನೆ ಮೇಲೆ ದಾಳಿ ಮಾಡಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ನಕಲಿ ಉತ್ಪನ್ನಗಳನ್ನು ಸೀಜ್ ಮಾಡಿದ್ದಾರೆ. ಹೀಗೆ ವಶಪಡಿಸಿಕೊಂಡ ನಕಲಿ ಮಾಲುಗಳ ಅಂದಾಜು ಮೌಲ್ಯ ೩ ಕೋಟಿ ರೂ. ಎನ್ನಲಾಗಿದೆ.
ಇನ್ನು ನಕಲಿ ವಸ್ತುಗಳನ್ನು ಸಣ್ಣ ಪುಟ್ಟ ಅಂಗಡಿಗಳಿಗೆ ಅರ್ಧ ಬೆಲೆಗೆ ಸರಬರಾಜು ಮಾಡಲಾಗಿತ್ತಿತ್ತು ಎಂದೂ ಹೇಳಲಾಗುತ್ತಿದೆ. ಇದರಿಂದ ಬ್ರಾಂಡೆಡ್ ಕಂಪನಿಗಳ ವಹಿವಾಟಿಗೆ ಹೊಡೆತವಾಗುವುದರ ಜತೆಗೆ ಜನರ ಜೇಬಿಗೆ ನೇರವಾಗಿ ಕತ್ತರಿ ಬೀಳುತ್ತಿತ್ತು.
ಸದ್ಯ ನಕಲಿ ಉತ್ಪನ್ನಗಳ ದಂಧೆ ನಡೆಸುತ್ತಿದ್ದ ಪ್ರಮುಖ ಆರೋಪಿ ದಳಪತ್ ಸಿಂಗ್ ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕಾಚೋಹಳ್ಳಿಯಲ್ಲಿ ನಕಲಿ ಉತ್ಪನ್ನಗಳ ಕಾರ್ಖಾನೆ ತೆರೆದಿದ್ದ ದಳಪತ್ ಸಿಂಗ್ ನಕಲಿ ಡಿಟರ್ಜೆಂಟ್ ಪೌಡರ್ ಮತ್ತು ಸೊಳ್ಳೆ ನಿವಾರಕ ದ್ರವಗಳನ್ನು ಉತ್ಪಾದಿಸುತ್ತಿದ್ದ. ಈ ನಕಲಿ ಉತ್ಪನ್ನಗಳಿಗೆ ಬೇಕಾದ ಲೇಬಲ್ ಗಳನ್ನ ಗುಜರಾತ್ ನ ಸೂರತ್ ನಲ್ಲಿರುವ ಕೆಲವು ಪ್ರಿಂಟಿAಗ್ ಹಬ್‌ಗಳಿಂದ ದೊಡ್ಡ ಪ್ರಮಾಣದಲ್ಲಿ ತರಿಸಿಕೊಳ್ಳುತ್ತಿದ್ದ.
ನಕಲಿ ಉತ್ಪನ್ನಗಳನ್ನು ಹುಬ್ಬಳ್ಳಿ, ಬೆಳಗಾವಿ, ಕೋಲಾರ, ಮಂಗಳೂರು, ಚೆನ್ನೈ, ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ತೆಲಂಗಾಣ ಮತ್ತು ಆಂಧ್ರಪ್ರದೇಶಕ್ಕೆ ಪೂರೈಕೆ ಮಾಡಲಾಗುತ್ತಿತ್ತು ಎನ್ನಲಾಗಿದೆ. ಈ ನಕಲಿ ದಂಧೆಯ ಜಾಲ ದೊಡ್ಡದಾಗಿದ್ದು ಸಿಸಿಬಿ ಪೊಲೀಸರು ಮತ್ತಷ್ಟು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
