ಏಳು ತಿಂಗಳ ಮಗುವಿನ ಮೇಲೆ ಅತ್ಯಾಚಾರವೆಸಗಿದ್ದ ವ್ಯಕ್ತಿಗೆ ಕೋಲ್ಕತ್ತಾದ ವಿಶೇಷ ನ್ಯಾಯಾಲಯವು ಮರಣದಂಡನೆ ಶಿಕ್ಷೆ ವಿಧಿಸಿದೆ.
ಆರೋಪಿ ರಾಜೀವ್ ಘೋಷ್ಗೆ ಮರಣದಂಡನೆ ವಿಧಿಸಿ ಐತಿಹಾಸಿಕ ತೀರ್ಪನ್ನು ನೀಡಿದೆ. ಈ ಘಟನೆಯನ್ನು ಅಪರೂಪದಲ್ಲಿ ಅಪರೂಪ ಎಂದು ನ್ಯಾಯಾಲಯ ಘೋಷಿಸಿದೆ.
ಈ ಭಯಾನಕ ಘಟನೆ 2024ರ ನವೆಂಬರ್ನಲ್ಲಿ ನಡೆದಿದೆ. ಕೋಲ್ಕತ್ತಾದ ಬರ್ತೊಲ್ಲಾ ಪ್ರದೇಶದಲ್ಲಿ ನಡೆದಿದೆ. ಈ ದಂಪತಿಗೆ ಸರಿಯಾದ ಸೂರಿರಲಿಲ್ಲ, ಫುಟ್ಬಾತ್ನಲ್ಲೇ ಮಲಗಿಕೊಳ್ಳುತ್ತಿದ್ದರು. ಶಿಶು ಕಾಣೆಯಾಗಿತ್ತು, ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.
ಕೆಲ ಗಂಟೆಗಳ ಬಳಿಕ ತೀವ್ರ ಗಾಯಗಳಿಂದ ಮಳಲುತ್ತಿದ್ದ ಮಗು ಫುಟ್ಪಾತ್ನಲ್ಲಿ ಮಲಗಿ ಅಳುತ್ತಿರುವುದು ಕಂಡುಬಂದಿತ್ತು. ವೈದ್ಯಕೀಯ ಪರೀಕ್ಷೆ ವೇಳೆ ಗುಪ್ತಾಂಗದಲ್ಲಿ ಗಾಯಗಳು ಕಂಡುಬಂದಿದ್ದವು. ಆಗ ಅತ್ಯಾಚಾರ ನಡೆದಿದೆ ಎಂಬುದು ದೃಢಪಟ್ಟಿತ್ತು.
ಘಟನೆ ಬಳಿಕ ಪೊಲೀಸರು ಪ್ರದೇಶದ ಸುತ್ತಮುತ್ತಲಿನ ದೃಶ್ಯಾವಳಿಗಳನ್ನು ಬಳಸಿಕೊಂಡು ಆರೋಪಿ ರಾಜೀವ್ ಘೋಷ್ನನ್ನು ಪತ್ತೆ ಮಾಡಿದ್ದರು. ಅಪರಾಧ ನಡೆದ ಕೆಲವು ದಿನಗಳ ನಂತರ, ಕಳೆದ ವರ್ಷ ಡಿಸೆಂಬರ್ 4 ರಂದು ಪಶ್ಚಿಮ ಬಂಗಾಳದ ಝಾರ್ಗ್ರಾಮ್ನಲ್ಲಿ ಘೋಷ್ನನ್ನು ಬಂಧಿಸಲಾಯಿತು.
ತನಿಖೆಯನ್ನು ತ್ವರಿತವಾಗಿ ಮುಗಿಸಿ, 26 ದಿನಗಳಲ್ಲಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಯಿತು. ಪ್ರಕರಣವನ್ನು ತ್ವರಿತವಾಗಿ ವಿಚಾರಣೆಗೆ ಒಳಪಡಿಸಲಾಯಿತು, ಇದು ತ್ವರಿತ ವಿಚಾರಣೆಗೆ ಕಾರಣವಾಯಿತು. ಫೆಬ್ರವರಿ 17, 2025 ರಂದು, ನ್ಯಾಯಾಲಯವು ಘೋಷ್ ಅವರನ್ನು ಪೋಕ್ಸೋ ಕಾಯ್ದೆಯ ಸೆಕ್ಷನ್ 6 ಅಡಿಯಲ್ಲಿ ತಪ್ಪಿತಸ್ಥನೆಂದು ಘೋಷಿಸಿತು.
ಮಗುವಿನ ಆರೋಗ್ಯ ಗಂಭೀರ ಸ್ಥಿತಿಯಲ್ಲಿದ್ದು, ಕೋಲ್ಕತ್ತಾದ ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಮಗುವಿನ ಕುಟುಂಬಕ್ಕೆ 10 ಲಕ್ಷ ರೂ ಪರಿಹಾರ ನೀಡುವಂತೆ ಕೋರ್ಟ್ ಆದೇಶಿಸಿದೆ.
