Mangalore and Udupi news
ಗ್ರೌಂಡ್ ರಿಪೋರ್ಟ್ದೇಶ- ವಿದೇಶಪ್ರಸ್ತುತಮಂಗಳೂರುರಾಜ್ಯ

ದಕ್ಷಿಣಕನ್ನಡದಲ್ಲಿ ಕಾಫಿ ಬೆಳೆ ಪೋತ್ಸಾಹಿಸಲು ಸಂಸದ ಕ್ಯಾ. ಬ್ರಿಜೇಶ್ ಚೌಟ ಮನವಿ

ಮಂಗಳೂರು: ದಕ್ಷಿಣ ಕನ್ನಡದ ಅಡಿಕೆ ಕೃಷಿಕರು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆಗಳ ಸಚಿವ ಪೀಯೂಷ್ ಗೋಯಲ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ಬಜೆಟ್ ಅಧಿವೇಶದ ಹಿನ್ನಲೆ ನವದೆಹಲಿಯಲ್ಲಿರುವ ಕ್ಯಾ. ಚೌಟ ಅವರು ಇಂದು ಸಚಿವ ಪೀಯೂಷ್ ಅವರನ್ನು ಭೇಟಿಯಾಗಿದ್ದು, ಹೊರ ದೇಶಗಳಿಂದ ತಪಾಸಣೆಗೆ ಒಳಗಾಗದೆ ಅಡಿಕೆ ಆಮದು ಆಗುತ್ತಿರುವ ಹಿನ್ನಲೆ ನಮ್ಮ ಸ್ಥಳೀಯ ಅಡಿಕೆ ಬೆಳೆಗಾರರು ನ್ಯಾಯಸಮ್ಮತವಲ್ಲದ ದರ ಸಮರ ಎದುರಿಸುತ್ತಿದ್ದಾರೆ. ಇದರಿಂದ ಜಿಲ್ಲೆಯ ಅಡಿಕೆ ಕೃಷಿಕರು ಸೂಕ್ತ ಬೆಲೆ ದೊರೆಯದೆ ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ, ನಿಯಂತ್ರಣವಿಲ್ಲದೆ ಆಮದಾಗುತ್ತಿರುವ ಅಡಿಕೆ ಉತ್ಪನ್ನಗಳ ಮೇಲೆ ನಿಗಾ ವಹಿಸುವ ಮೂಲಕ ಇಲ್ಲಿನ ಅಡಿಕೆಗೆ ಸೂಕ್ತ ಮಾರುಕಟ್ಟೆ ದರ ದೊರೆಯುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಚಿವರಲ್ಲಿ ಮನವಿ ಮಾಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಬೆಳೆಗೆ ಇತ್ತೀಚಿನ ವರ್ಷಗಳಲ್ಲಿ ಕೊಳೆರೋಗ ಹಾಗೂ ಎಲೆಚುಕ್ಕಿ ಸಮಸ್ಯೆ ಹೆಚ್ಚಾಗಿರುವುದರಿಂದ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಈ ಕಾರಣಕ್ಕೆ ಜಿಲ್ಲೆಯಲ್ಲಿ ಅಡಿಕೆಗೆ ಕಾಫಿಯನ್ನು ಪರ್ಯಾಯ ಬೆಳೆಯಾಗಿ ಬೆಳೆಸುವಲ್ಲಿ ರೈತರನ್ನು ಉತ್ತೇಜಿಸುವುದಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕ್ಯಾ. ಚೌಟ ಅವರು ಸಚಿವರನ್ನು ಕೋರಿದ್ದಾರೆ. ಕಾಫಿ ಬೆಳೆಯನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉತ್ತೇಜಿಸುವುದಕ್ಕೆ ಕಾಫಿ ಮಂಡಳಿ ನಡೆಸಿದ್ದ ಸಮೀಕ್ಷೆ ವಿವರಗಳ ಬಗ್ಗೆ ಸಂಸತ್ತಿನಲ್ಲಿ ಪ್ರಶ್ನೆ ಕೇಳಿದ್ದನ್ನು ಇದೇವೇಳೆ ಸಚಿವರ ಗಮನಕ್ಕೆ ತಂದರು. ಹೀಗಿರುವಾಗ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಫಿ ಬೆಳೆ-ಬೆಳೆಗಾರರನ್ನು ಪ್ರೋತ್ಸಾಹಿಸುವುದಕ್ಕೆ ಹಾಗೂ ಈ ಲಾಭದಾಯಕ ಬೆಳೆ ಬಗ್ಗೆ ಹೆಚ್ಚಿನ ಅರಿವು ಮೂಡಿಸುವುದಕ್ಕೆ ಮಂಗಳೂರಿನಲ್ಲಿ ತನ್ನ ಕಚೇರಿಯನ್ನು ಪ್ರಾರಂಭಿಸಲು ಕಾಫಿ ಮಂಡಳಿಗೆ ನಿರ್ದೇಶನ ನೀಡುವಂತೆಯೂ ಸಚಿವ ಪೀಯೂಷ್ ಗೋಯಲ್ ಅವರಿಗೆ ಕ್ಯಾ. ಚೌಟ ಮನವಿ ಮಾಡಿದ್ದಾರೆ.

ಭೇಟಿ ಬಳಿಕ ಪ್ರತಿಕ್ರಿಯಿಸಿರುವ ಸಂಸದರು, ” ಸಚಿವ ಪೀಯೂಷ್ ಗೋಯೆಲ್ ಅವರು ನಮ್ಮ ಎಲ್ಲಾ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ದ.ಕ. ಅಡಿಕೆ ಬೆಳೆಗಾರರ ಸಂಕಷ್ಟಕ್ಕೆ ಸಚಿವರಿಂದ ಸೂಕ್ತ ಪರಿಹಾರ ದೊರೆಯಬಹುದು” ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಡವಾಳ ಹೂಡಿಕೆ ಆಕರ್ಷಿಸುವುದಕ್ಕೆ ಪ್ರಾರಂಭಿಸಿರುವ ಬ್ಯಾಕ್ ಟು ಊರು ಸೇರಿದಂತೆ ಕ್ಯಾ. ಚೌಟ ಆರಂಭಿಸಿರುವ ವಿನೂತನ ಪರಿಕಲ್ಪನೆಗಳಿಗೆ ಎಲ್ಲ ರೀತಿಯ ಬೆಂಬಲ, ಪ್ರೋತ್ಸಾಹ ನೀಡುವುದಾಗಿ ಸಚಿವ ಪೀಯೂಷ್ ಗೋಯಲ್ ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ. ಎರಡು ತಿಂಗಳ(ನವೆಂಬರ್ ಮೊದಲ ವಾರ) ಹಿಂದೆಯೂ ಸಚಿವರಿಗೆ ಸುದೀರ್ಘ ಪತ್ರ ಬರೆದು ದ.ಕ. ಜಿಲ್ಲೆಯ ಅಡಿಕೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸುವಂತೆ ಮನವಿ ನೀಡಿದ್ದರು. ಜಿಲ್ಲೆಯಲ್ಲಿ ಕೊಳೆರೋಗ ಹಾಗೂ ಎಲೆಚುಕ್ಕಿ ರೋಗ ಇರುವ ಕಾರಣ ಅಡಿಕೆಗೆ ಕಾಫಿಯನ್ನು ಪರ್ಯಾಯ ಬೆಳೆಯಾಗಿ ಪ್ರೋತ್ಸಾಹಿಸುವುದಕ್ಕೆ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಪ್ರಸ್ತಾಪಿಸಿದ್ದರು. ಆ ಮೂಲಕ ಸಂಸದರು ಜಿಲ್ಲೆಯ ಅಡಿಕೆ ಕೃಷಿಕರ ಸಮಸ್ಯೆಗೆ ಪರಿಹಾರ ಒದಗಿಸುವುದಕ್ಕೆ ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ.

Advertisement

Related posts

Leave a Comment