Mangalore and Udupi news
ಅಪರಾಧಗ್ರೌಂಡ್ ರಿಪೋರ್ಟ್ಪ್ರಸ್ತುತರಾಜ್ಯ

ಲೋಕಾಯುಕ್ತ ಡಿವೈಎಸ್‌ಪಿ ಹೆಸರಿನಲ್ಲಿ ಬ್ಲ್ಯಾಕ್‌ಮೇಲ್‌ – ಆರೋಪಿ ಪತ್ತೆ.!!

Advertisement

ಲೋಕಾಯುಕ್ತ ಡಿವೈಎಸ್‌ಪಿ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಕರೆ ಮಾಡಿ ಹಣಕ್ಕೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪಿಯನ್ನು ವಿಧಾನಸೌಧ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಬೆಳಗಾವಿ ಮೂಲದ ಮುರುಗಪ್ಪ ನಿಂಗಪ್ಪ ಕುಂಬಾರ್‌(56) ಎಂದು ಗುರುತಿಸಲಾಗಿದೆ.

ಈತ ಸೇವೆಯಿಂದ ವಜಾಗೊಂಡಿರುವ ರಿಸರ್ವ್‌ ಪೊಲೀಸ್‌ ಕಾನ್‌ಸ್ಟೇಬಲ್‌ ಆಗಿದ್ದು, ಈತನ ವಿರುದ್ಧ ರಾಜ್ಯದ ವಿವಿಧ ಪೊಲೀಸ್‌ ಠಾಣೆಗಳಲ್ಲಿ 60ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಸದ್ಯ ಸರ್ಕಾರಿ ಅಧಿಕಾರಿಗಳಿಗೆ ಬ್ಲ್ಯಾಕ್‌ ಮೇಲ್‌ ಪ್ರಕರಣವೊಂದರಲ್ಲಿ ಮುದ್ದೆಬಿಹಾಳ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ವಿಧಾನಸೌಧ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಸಂಬಂಧ ಬಾಡಿ ವಾರೆಂಟ್‌ ಮೇರೆಗೆ ಶೀಘ್ರದಲ್ಲೇ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಲೋಕಾಯುಕ್ತ ಅಧಿಕಾರಿಯ ಸೋಗಿನಲ್ಲಿ ವ್ಯಕ್ತಿಯೊಬ್ಬ ಸರ್ಕಾರಿ ಅಧಿಕಾರಿಗಳಿಗೆ ಕರೆ ಮಾಡಿ ಅಕ್ರಮ ಆಸ್ತಿ ಸಂಬಂಧ ನಿಮ್ಮ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗುತ್ತಿದೆ. ಪ್ರಕರಣ ದಾಖಲಾಗದಂತೆ ನೋಡಿಕೊಳ್ಳಬೇಕಾದರೆ, ಹಣ ನೀಡುವಂತೆ ಬ್ಲ್ಯಾಕ್‌ ಮೇಲ್‌ ಮಾಡುತ್ತಿದ್ದಾನೆ ಎಂದು ಲೋಕಾಯುಕ್ತ ಡಿವೈಎಸ್ಪಿ ಬಸವರಾಜು ಮುಗದುಮ್‌ ವಿಧಾನಸೌಧ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಈ ದೂರು ಆಧರಿಸಿ ತನಿಖೆ ನಡೆಸಿ ಆರೋಪಿಯನ್ನು ಪತ್ತೆಹಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಯ ಮೊಬೈಲ್‌ ಸಂಖ್ಯೆಯನ್ನು ಟ್ರೂ ಕಾಲರ್‌ನಲ್ಲಿ ಪರಿಶೀಲಿಸಿದಾಗ ಲೋಕಾಯುಕ್ತ ಡಿವೈಎಸ್ಪಿ ಎಂದು ತೋರಿಸುತ್ತಿತ್ತು. ಲೊಕೇಶನ್‌ ಪರಿಶೀಲನೆ ವೇಳೆ ಮಹಾರಾಷ್ಟ್ರದ ಶಿರೋಲ್‌ ಎಂದು ತೋರಿಸುತ್ತಿತ್ತು. ಹೀಗಾಗಿ ವಿಧಾನಸೌಧ ಪೊಲೀಸರು ಆ ಮೊಬೈಲ್‌ ಸಂಖ್ಯೆಯ ಮತ್ತು ಲೊಕೇಶನ್‌ ವಿಳಾಸವನ್ನು ಶಿರೋಲ್‌ ಪೊಲೀಸರಿಗೆ ಕಳುಹಿಸಿದ್ದರು. ಶಿರೋಲ್‌ ಪೊಲೀಸರು ಪರಿಶೀಲನೆ ಮಾಡಿದಾಗ ಆ ಸಿಮ್‌ ಕಾರ್ಡ್‌ ಮುದ್ದೆಬಿಹಾಳ ಪೊಲೀಸರು ಜಪ್ತಿ ಮಾಡಿರುವುದು ಗೊತ್ತಾಗಿದೆ. ಮುದ್ದೆಬಿಹಾಳ ಪೊಲೀಸರನ್ನು ಸಂಪರ್ಕಿಸಿದಾಗ ಆ ಸಿಮ್‌ ಬಳಸುತ್ತಿದ್ದ ವ್ಯಕ್ತಿ ಮುರುಗಪ್ಪ ಎಂಬುದು ಗೊತ್ತಾಗಿದೆ. ಸದ್ಯ ಆತ ಪ್ರಕರಣವೊಂದರಲ್ಲಿ ಜೈಲಿನಲ್ಲಿರುವ ವಿಚಾರ ತಿಳಿಸಿದ್ದಾರೆ.

Related posts

Leave a Comment