
ಮಂಗಳೂರು: ಅಲ್ಲಿ ನಡೆಯುತ್ತಿರುವುದನ್ನು ಕಂಡರೆ ನಿಜಕ್ಕೂ ಒಮ್ಮೆಗೆ ದಂಗಾಗುತ್ತೀರಿ. ಅಷ್ಟರ ಮಟ್ಟಿಗೆ ಅಲ್ಲಿ ಅಕ್ರಮ ನಡೆದಿದೆ. ಭೂ ಒಡಲಿಗೆ ಕನ್ನಹಾಕಿ ಬರಿದು ಮಾಡಿದ್ದಾರೆ. ಹತ್ತಾರು ವರ್ಷಗಳಿಂದ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಈ ಜಾಗವನ್ನು ನೋಡಿದ್ರೆ, ಇದು ಸಿನೆಮಾಗಳಲ್ಲಿ ತೋರಿಸುವ ರೀತಿಗಿಂತ ದುಪ್ಪಟ್ಟಾಗಿದೆ ಅನ್ನುತ್ತೀರಿ. ಬೇಕಾಬಿಟ್ಟಿ ಅಗೆದು ಕಲ್ಲು ಗಣಿಗಾರಿಕೆ ನಡೆಸಿದರೂ, ಈ ಬಗ್ಗೆ ಲಕ್ಷ್ಯ ವಹಿಸಬೇಕಾದ ಮಂದಿಯೇ ಸುಮ್ಮನಾಗಿದ್ದಾರೆ.
ಹತ್ತಾರು ವರ್ಷಗಳಿಂದ ಎಗ್ಗಿಲ್ಲದೆ ಅಕ್ರಮ ಗಣಿಗಾರಿಕೆ ನಡೆದರೂ ಯಾವನೊಬ್ಬ ಅಧಿಕಾರಿಯೂ ಈಗ ಬಗ್ಗೆ ತುಟಿ ಪಿಟಿಕ್ ಅನ್ನದೇ ಇರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಎಲ್ಲಾ ತಿಳಿದ ಅಧಿಕಾರಿಗಳು ಯಾಕೆ ಸುಮ್ಮನಿದ್ದಾರೆ? ದಶಕಗಳ ಕಾಲದಲ್ಲಿ ಈ ಅಕ್ರಮ ಗಣಿಗಾರಿಕೆ ಅಧಿಕಾರಿಗಳ ಕಿವಿಗೆ ಒಂದು ದಿನವೂ ಬಿದ್ದಿಲ್ಲವೇ? ಭೂ ಒಡಲನ್ನು ಬಗೆದು ಬಗೆದು ಕೊಳ್ಳೆಹೊಡೆದು ಕೋಟಿ ಕೋಟಿ ಲಾಭ ಮಾಡಿದ್ದಾರೆ ಖತರ್ನಾಕ್ ಮಂದಿ.
ಇದು ಬೇರೆಲ್ಲೂ ಅಲ್ಲ ಕಿನ್ನಿಗೋಳಿ ಸಮೀಪದ ಐಕಳ ನೆಲ್ಲಿಗುಡ್ಡೆ ಎಂಬಲ್ಲಿ ನಡೆಯುತ್ತಿರುವ ಅಕ್ರಮ ಕಪ್ಪು ಕಲ್ಲು ಗಣಿಗಾರಿಕೆ. ಪ್ರಭಾವಿ ವ್ಯಕ್ತಿಗಳ ಕೈ ಕೆಳಗೆ ನಡೆಯುತ್ತಿರುವ ಈ ಅಕ್ರಮದಲ್ಲಿ ಕೋಟಿಗಟ್ಟಲೇ ಹಣ ಅಕ್ರಮವಾಗಿ ಲಾಭ ಪಡೆದಿರುವ ಶಂಕೆ ವ್ಯಕ್ತವಾಗಿದೆ. ಈ ಜಾಗ ನೋಡಿದರೆ ಗೊತ್ತಾಗುತ್ತದೆ ಇದು ನಿನ್ನೆ, ಮೊನ್ನೇಯದಲ್ಲ ಸುಮಾರು ದಶಕಗಳಿಂದ ನಡೆಯುತ್ತಿರುವ ಈ ಅಕ್ರಮ ಅಧಿಕಾರಿಗಳ ಗಮನಕ್ಕೆ ಬರದಿರುವುದೂ ನಿಜಕ್ಕೂ ಆಶ್ಚರ್ಯ ಪಡುವಂತಹದ್ದೇ.!!
ದೀಪಾವಳಿ ಸಮಯದಲ್ಲಿ ಪಟಾಕಿ ಅಂಗಡಿ ಹಾಕಬೇಕಾದ್ರೆ ಪರ್ಮಿಷನ್, ಅದು ಇದು ದಾಖಲೆ ಕೇಳುವ ಸರಕಾರ ಈ ಅಕ್ರಮ ಕೋರೆಗಳಲ್ಲಿ ಸ್ಪೋಟಕ ಬಳಸಿ ಕಲ್ಲು ಬಂಡೆ ಸ್ಫೋಟ ಮಾಡಿ ಪ್ರಕೃತಿಯನ್ನು ನಾಶ ಮಾಡುತ್ತಾ ಅಕ್ರಮ ಗಣಿಗರಿಕೆಗೆ ಯಾವ ದಾಖಲೆಗಳೂ ಬೇಕಾಗಿಲ್ಲವೇ.? ಗುಪ್ತಚರ ಮಾಹಿತಿ ಇಲ್ಲವೇ…? ನಿಷೇಧಿತ ಜೀಲೆಟಿನ್ ಕಡ್ಡಿ ಬಳಸಿ ಬಂಡೆ ಕಲ್ಲು ಸ್ಫೋಟ ಮಾಡಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ ಸಂಬAಧಪಟ್ಟ ಅಧಿಕಾರಿಗಳು ಮೌನವಹಿಸಿರುವುದು ಅನುಮಾನ ಉಂಟು ಮಾಡುತ್ತಿದೆ, ಕಾನೂನು, ನಿಯಮ ಯಾರಿಗೆ ಪಟಾಕಿ ಅಂಗಡಿ ಇಡುವವರಿಗೆ ಮಾತ್ರವೇ.? ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ.
ಕಿನ್ನಿಗೋಳಿ ಸಮೀಪದ ಐಕಳ ನೆಲ್ಲಿಗುಡ್ಡೆ ಎಂಬಲ್ಲಿರುವ ಈ ಅಕ್ರಮ ಕೋರೆ ಮಂಗಳೂರು ವ್ಯಾಪ್ತಿಯಲ್ಲಿ ಬರುತ್ತದೇ ಆದರೆ ಗಣಿ ಅಧಿಕಾರಿಗಳು ಸುಮ್ಮನಿರುವುದಕ್ಕೆ ಕಾಂಚನ ಸದ್ದು ಮಾಡುತ್ತಿದೆ ಎನ್ನುವುದಕ್ಕೆ ಯಾವುದೇ ಅನುಮಾನ ಬೇಡ. ಪ್ರಕೃತಿಯ ಮಡಿಲನ್ನು ಅಕ್ರಮವಾಗಿ ಸ್ಪೋಟಕ ಬಳಸಿ ಈ ಗಣಿ ಉದ್ಯಮಿಗಳು ಅತ್ಯಾಚಾರ ಮಾಡುತ್ತಿದ್ದರೂ ಅಧಿಕಾರಿಗಳು ಮಾತ್ರ ನಿದ್ದೆಗೆ ಜಾರಿರುವುದು ನಾಚಿಕೇಡಿನ ಸಂಗತಿ. ಈ ಅಕ್ರಮ ದಂಧೆಯಲ್ಲಿ ಪಂಚಾಯತ್ ನಿಂದ ಹಿಡಿದು ಎಲ್ಲಾ ಅಧಿಕಾರಿಗಳು ಕೂಡ ಶಾಮಿಲಾಗಿದ್ದಾರೆಯೇ.?? ಇಲ್ಲದಿದ್ರೆ ಈ ಅಕ್ರಮ ಇಷ್ಟು ಸಲೀಸಾಗಿ ನಡೆಯಲು ಹೇಗೆ ಸಾಧ್ಯ.??
ಅಧಿಕಾರಿಗಲೇ ಈ ಪ್ರದೇಶಕ್ಕೆ ಇನ್ನಾದರೂ ಭೇಟಿ ನೀಡಿ, ಪರಿಶೀಲನೆ ನಡೆಸಿ, ನಿಮ್ಮ ವಿವೇಚನೆಗೆ ಆನುಗುಣವಾಗಿ ಕ್ರಮ ಕೈಗೊಳ್ಳಿ ಪ್ರಕೃತಿಯನ್ನ ಉಳಿಸಿ ಇಂತಹ ಅಕ್ರಮ ನಡೆಸುವವರಿಗೆ ತಕ್ಕ ಶಿಕ್ಷೆ ನೀಡಿ. ಒಟ್ಟಿನಲ್ಲಿ ಭೂ ಒಡಲಿಗೆ ಕನ್ನ ಹಾಕಿ ಕೋಟಿ ಕೋಟಿ ಬಾಚಿದರೂ ಅಧಿಕಾರಿಗಳು ಯಾಕೆ ಸುಮ್ಮನಿದ್ದಾರೆ. ಇತ್ತೀಚಿಗಷ್ಟೇ ಗಣಿ ಇಲಾಖೆಯ ಅಧಿಕಾರಿಯ ಮನೆ ಮೇಲೆ ದಾಳಿ ಮಾಡಿದ್ದನ್ನೂ ನೆನಪಿಸಿಕೊಳ್ಳಬೇಕು. ಇಲ್ಲಿ ಅಧಿಕಾರಿಗಳೂ ಶಾಮೀಲಾಗಿದ್ದಾರೆಯೇ? ಅಕ್ರಮಗಳಿಗೆ ಬ್ರೇಕ್ ಹಾಕಬೇಕಾದ ಮಂದಿಯ ಕಣ್ಣಿಗೆ ಇದು ಬಿದ್ದಿಲ್ಲವೇ? ಸಣ್ಣ ಪುಟ್ಟ ವಿಷಯಕ್ಕೆ ದೊಡ್ಡ ರಂಪಾಟ ಮಾಡುವ ಆಡಳಿತ, ಅಧಿಕಾರಿ ವರ್ಗ ಈಗ ಏನು ಮಾಡುತ್ತಿದೆ? ಈ ಅಕ್ರಮ ಯಾರ ಕಣ್ಣಿಗೆ ಬಿದ್ದಿಲ್ಲವೇ? ಜನಪ್ರತಿನಿಧಿಗಳು ಯಾಕೆ ಈ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂಬುವುದು ಪ್ರಶ್ನೆಯಾಗಿದೆ.