ವಿವಾಹಿತ ಮಹಿಳೆಗೆ ಮಾತ್ರೆ ನೀಡಿ ಲೈಂಗಿಕ ದೌರ್ಜನ್ಯ ಎಸಗಿದ್ದ ಮಂತ್ರವಾದಿಯನ್ನು ಪೊಲೀಸರು ಬಂಧಿಸಿದ್ದಾರೆ. ಪತಿಯೊಂದಿಗಿನ ವೈಷಮ್ಯವನ್ನು ಕೊನೆಗೊಳಿಸುವುದಾಗಿ ನಂಬಿಸಿ ಮತ್ತು ಬರಿಸುವ ಮಾತ್ರೆ ನೀಡಿ ಹಲವು ಬಾರಿ ದೌರ್ಜನ್ಯಗೈದು 61 ಲಕ್ಷ ರೂ. ವಂಚಿಸಿದ ಘಟನೆ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ಮಂತ್ರವಾದಿ ಹಾಗೂ ಆತನ ಸಹಾಯಕನನ್ನು ಪೊಲೀಸರು ಬಂಧಿಸಿದ್ದಾರೆ.
ಸಂತ್ರಸ್ಥ ಮಹಿಳೆ ನೀಡಿದ ದೂರಿನನ್ವಯ ಕ್ರಮ ಕೈಗೊಳ್ಳಲಾಗಿದೆ. ಕೇರಳದ ತ್ರಿಶೂರ್‌ನ ಚಾವಕ್ಕಾಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮಲಪ್ಪುರಂ ಮಾರಂಜೇರಿ ನಿವಾಸಿ ಮಂತ್ರವಾದಿ ತಾಜುದ್ದೀನ್ (46) ಹಾಗೂ ಈತನ ಸಹಾಯಕ ನಾಯರಂಜಾಡಿ ಶಕೀರ್ (27) ಬಂಧಿತ ಆರೋಪಿಗಳು.
ವಿವಾಹಿತೆ ಪತಿಯೊಂದಿಗೆ ಜಗಳವಾಡಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ಈ ಮಧ್ಯೆ ಮಂತ್ರವಾದಿಯ ಶಿಷ್ಯನೆಂದು ನಂಬಿಸಿ ಶಕೀರ್ ಮಹಿಳೆಯ ಮನೆಗೆ ಹೋಗಿದ್ದಾನೆ. ಅಲ್ಲಿ ತಲೆನೋವಿಗಿರುವ ಔಷಧಿ ಎಂದು ತಿಳಿಸಿ ಮಾತ್ರೆ ನೀಡಿದ್ದನು. ಇದನ್ನು ಸೇವಿಸಿದ ಯುವತಿ ಪ್ರಜ್ಞಾಹೀನಳಾದಳು. ಬಳಿಕ ಶಕೀರ್ ಯುವತಿಯ ನಗ್ನ ಚಿತ್ರ ತೆಗೆದು, ಯುವತಿಗೆ ಪ್ರಜ್ಞೆ ಮರಳಿದ ಬಳಿಕ ಈ ಚಿತ್ರಗಳನ್ನು ತೋರಿಸಿ ಲೈಂಗಿಕವಾಗಿ ದೌರ್ಜನ್ಯಗೈದು ಲಕ್ಷಾಂತರ ರೂಪಾಯಿ ವಂಚಿಸಿರುವುದಾಗಿಯೂ ಹೇಳಲಾಗಿದೆ.
ಮಂತ್ರವಾದಿಯಿಂದಲೂ ಅತ್ಯಾಚಾರ
ಶಕೀರ್ ಲೈಂಗಿಕ ದೌರ್ಜನ್ಯ ಎಸಗಿದ ಬಳಿಕ ಮಂತ್ರವಾದಿ ತಾಜುದ್ದೀನ್ ಸಂತ್ರಸ್ತೆಯ ಮನೆಗೆ ತಲುಪಿ ಪ್ರೇತಬಾಧೆ ಇದೆ ಎಂದು ತಿಳಿಸಿ ಅದಕ್ಕೆ ಪರಿಹಾರ ಮಾಡುವುದಾಗಿ ಔಷಧಿ ನೀಡಿದ್ದಾನೆ. ಅದನ್ನು ಸೇವಿಸಿದ ಯುವತಿ ಪ್ರಜ್ಞಾಹೀನಳಾದಾಗ ಆಕೆಯನ್ನು ದೌರ್ಜನ್ಯಗೈದಿದ್ದಾನೆ. ಬಳಿಕ ಹಲವು ಬಾರಿಯಾಗಿ ಯುವತಿಯ ಮನೆಗೆ ತಲುಪಿ ಇದೇ ರೀತಿ ನಡೆಸಿ, 60 ಲಕ್ಷ ರೂ. ವಂಚಿಸಿರುವುದಾಗಿಯೂ ಚಾವಕ್ಕಾಡ್ ಪೊಲೀಸರು ದಾಖಲಿಸಿದ ದೂರಿನಲ್ಲಿ ಹೇಳಲಾಗಿದೆ. ಸದ್ಯ ಚಾವಕ್ಕಾಡ್ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.