ದೇಶದಾದ್ಯಂತ ನವರಾತ್ರಿ ವೈಭವ ಶುರುವಾಗಿದೆ. ಎಲ್ಲೆಲ್ಲೂ ನವಶಕ್ತಿ ಪೂಜಾ ಕೈಂಕರ್ಯಗಳು ಶುರುವಾಗಿವೆ. ನವರಾತ್ರಿ ಬಂದರೆ ಸಾಕು ಗುಜರಾತ್ನ ಅಹ್ಮದಾಬಾದ್ ಬೇರೆಯದ್ದೇ ರೀತಿಯ ಪದ್ಧತಿಗೆ ಸುದ್ದಿಯಾಗುತ್ತದೆ. ಜಗತ್ತಿನ ಎಲ್ಲರ ಗಮನವನ್ನು ಸೆಳೆಯುತ್ತದೆ ಅದಕ್ಕೆ ಕಾರಣ ಅಲ್ಲಿ ನಡೆಯುವ ಗರ್ಬಾ ನೃತ್ಯ ಅಹ್ಮದಾಬಾದ್ನ ಸಡುಮಾತಾ ನಿ ಪೋಲ್ನಲ್ಲಿ ಸುಮಾರು ಇನ್ನೂರು ವರ್ಷದಿಂದ ಒಂದು ಪದ್ಧತಿ ಜಾರಿಯಲ್ಲಿದೆ.
ಪ್ರತಿವರ್ಷ ನವರಾತ್ರಿಯಂದು ಅಲ್ಲಿ ಪುರುಷರು ಸ್ತ್ರೀ ವೇಷ ಧರಿಸಿ ಒಂಬತ್ತು ದಿನಗಳ ಈ ಹಬ್ಬದಲ್ಲಿ ಎಂಟು ರಾತ್ರಿಗಳಲ್ಲಿ ಗರ್ಬಾ ನೃತ್ಯ ಮಾಡುತ್ತಾರೆ. ಹೀಗೆ ಅವರು ಸ್ತ್ರೀ ವೇಷ ಧರಿಸಿ ನೃತ್ಯ ಮಾಡಲು ಪುರಾತನ ಶಾಪವೊಂದು ಕಾರಣ ಎಂದು ಹೇಳಲಾಗುತ್ತದೆ.
ಕಳೆದ ಎರಡು ಶತಮಾನಗಳಿಂದ ಹರಿದು ಬಂದಿರುವ ಈ ಒಂದು ಪದ್ಧತಿಯು ಕೇವಲ ಪದ್ಧತಿಯಲ್ಲ ಒಂದು ತಪಸ್ಸಿನಂತೆ ಇದನ್ನು ಆಚರಿಸಿಕೊಂಡು ಬರಲಾಗಿದೆ. ಶತಮಾನಗಳಿಂದ ವಸ್ತ್ರ ಪದ್ಧತಿಯನ್ನು ಈ ರೀತಿ ಬದಲಾಯಿಸಿಕೊಂಡು ನೃತ್ಯ ಮಾಡುವ ಪದ್ಧತಿ ನಡೆದುಕೊಂಡೇ ಬಂದಿದೆ. ಈ ಒಂದು ಹಬ್ಬ ಅವರಿಗೆ ಕೇವಲ ಹಬ್ಬವಲ್ಲ ಆಳದಲ್ಲಿ ಬೇರು ಬಿಟ್ಟಿರುವ ಕಡಿದಾದ ಒಂದು ಇತಿಹಾಸ, ಒಂದು ದಂತಕತೆ, ಒಂದು ಆಳವಾದ ಶ್ರದ್ಧೆ.
ಈ ರೀತಿಯ ಶತಮಾನಗಳಿಂದಲೂ ರೂಢಿಯಲ್ಲಿರುವ ಪದ್ಧತಿಯ ಹಿಂದೆ ಒಂದು ಕರಾಳ ಇತಿಹಾಸದ ಪುಟಗಳು ಇವೆ. ಸ್ಥಳೀಯರ ನಂಬಿಕೆ ಪ್ರಕಾರ 200 ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಸಡುಬೆನ್ ಎಂಬ ಮಹಿಳೆಯೊಬ್ಬಳು ಮೊಘಲರಿಂದ ರಕ್ಷಣೆ ಕೋರಿ ಬರೋಟ್ ಸಮುದಾಯದ ಜನರ ಬಳಿ ಬಂದಿದ್ದಳಂತೆ. ಮೊಘಲರು ಆ ಮಹಿಳೆಯನ್ನು ತಮ್ಮ ಉಪಪತ್ನಿ ಎಂದು ಘೋಷಿಸಿಕೊಂಡು ಹಿಂಸಿಸಿದಾಗ ಈ ಸಮುದಾಯದ ರಕ್ಷಣೆ ಕೇಳಿ ಈ ಸಮುದಾದಯದ ಎದುರು ಸಡುಬೇನ್ ಬರುತ್ತಾರೆ.
ಆದರೆ ಇಲ್ಲಿಯ ಜನರು ಆಕೆಯ ರಕ್ಷಣೆಗೆ ನಿಲ್ಲುವುದಿಲ್ಲ. ಆ ವೇಳೆ ಸಡುಬೆನ್ ಅವರ ಪುತ್ರ ಧಾರುಣವಾಗಿ ಅಂತ್ಯವಾಗುತ್ತಾನೆ. ಇದರಿಂದಾಗಿ ಕೋಪಗೊಂಡ, ಹತಾಶೆಗೊಂಡ ಸಡುಬೆನ್ ನಿಮ್ಮ ಮುಂದಿನ ಪೀಳಿಗೆ ಗಂಡಸರು ಹೇಡಿಗಳಾಗಿ ಹೋಗಲಿ ಸತಿ ಪದ್ಧತಿಯಂತೆ ಅವರು ಚಿತೆಯೇರಿ ಸತ್ತು ಹೋಗಲಿ ಎಂದು ಶಪಿಸಿದಳಂತೆ.
ಈ ಶಾಪದಿಂದ ವಿಮೋಚನೆಗೊಳ್ಳಲು ಅಂದಿನಿಂದ ಇಂದಿನವರೆಗೂ ಸಡುಮಾತಾ ನೀ ಪೋಲ್ನಲ್ಲಿ ಪ್ರತಿ ನವರಾತ್ರಿಯಂದು ಇಲ್ಲಿ ಈ ಪದ್ಧತಿಯೊಂದು ಜಾರಿಯಲ್ಲಿದ್ದುಕೊಂಡೇ ಬಂದಿದೆ. ಪ್ರತಿ ನವರಾತ್ರಿ ಎಂಟು ದಿನ ರಾತ್ರ ಇಲ್ಲಿ ಗಂಡಸರು ಹೆಣ್ಣುಮಕ್ಕಳ ಹಾಗೆ ಸಾರಿಯುಟ್ಟುಕೊಂಡು ಗರ್ಬಾ ನೃತ್ಯ ಮಾಡುತ್ತಾರೆ.