
ಪುತ್ತೂರು : ದ್ವಿಚಕ್ರ ವಾಹನದ ಸವಾರನೋರ್ವನು ಕರ್ತವ್ಯ ನಿರತ ಮಹಿಳಾ ಎಸ್‌ಐಗೆ ಆವಾಝ್ ಹಾಕಿ ಅವಾಚ್ಯವಾಗಿ ನಿಂದಿಸಿ ಹಲ್ಲೆಗೆ ಮುಂದಾಗಿದ್ದಾನೆಂದು ಆರೋಪಿಸಿ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಪ್ಯ ಪೊಲೀಸ್ ಠಾಣೆಯ ಮುಂಭಾಗದಲ್ಲಿನ ಆಟೋಸ್ಟ್ಯಾಂಡ್‌ನಲ್ಲಿ ರಿಕ್ಷಾ ಚಾಲಕನಾಗಿ ವೃತ್ತಿ ನಡೆಸುತ್ತಿರುವ ಕಡಬ ತಾಲೂಕಿನ ಗೊಳಿತೊಟ್ಟು ಗ್ರಾಮದ ನಿವಾಸಿ ಪ್ರತಾಪ್ ಗೌಡ (35) ಪ್ರಕರಣದ ಆರೋಪಿ.
ಸಂಪ್ಯ ಗ್ರಾಮಾಂತರ ಠಾಣೆಯ ಉಪ ನಿರೀಕ್ಷಕಿ ಸುಷ್ಮಾ ಜಿ.ಭಂಡಾರಿಯವರು ಸಿಬ್ಬಂದಿಯೊಂದಿಗೆ ಸಂಪ್ಯ ಠಾಣೆಯ ಮುಂಭಾಗದ ಮಾಣಿ – ಮೈಸೂರು ಹೆದ್ದಾರಿಯಲ್ಲಿ ವಾಹನ ತಪಾಸಣೆಯಲ್ಲಿ ತೊಡಗಿದ್ದರು.
ಈ ವೇಳೆ ಅದೇ ರಸ್ತೆಯಲ್ಲಿ ದ್ವಿಚಕ್ರ ವಾಹನವೊಂದು ಬಂದಿದೆ. ಆದರೆ ವಾಹನದ ಹಿಂಬದಿ ಸವಾರ ಹೆಟ್ ಧರಿಸಿರಲಿಲ್ಲ. ಆದ್ದರಿಂದ ಪೊಲೀಸರು ವಾಹನ ನಿಲ್ಲಿಸಿ ದಂಡ ಪಾವತಿಸುವಂತೆ ಸವಾರನಲ್ಲಿ ತಿಳಿಸಿದ್ದರು. ಇದರಿಂದ ಸಿಟ್ಟುಗೊಂಡ ಹಿಂಬದಿ ಸವಾರ ಪ್ರತಾಪ್ ಗೌಡ ಪೊಲೀಸರಿಗೇ ಆವಾಝ್ ಹಾಕಿ ಹಲ್ಲೆಗೆ ಮುಂದಾಗಿದ್ದಾನೆ. ಈತನ ವಿರುದ್ಧ ಈಗಾಗಲೇ ಮಂಗಳೂರಿನ ಕಾವೂರು ಠಾಣೆಯಲ್ಲಿ ಎರಡು ಪ್ರಕರಣ ಹಾಗೂ ಸಂಪ್ಯ ಗ್ರಾಮಾಂತರ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದೆ. ಈ ಬಗ್ಗೆ ಎಸ್‌ಐ ಸುಷ್ಮಾ ಭಂಡಾರಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.