Mangalore and Udupi news
ಅಪರಾಧರಾಜ್ಯ

ಕಳ್ಳರ ಜೊತೆ ಕೈ ಜೋಡಿಸಿ ಲಕ್ಷ ಲಕ್ಷ ಹಣ ಲಪಟಾಯಿಸಿದ್ದ ಹೆಡ್ ಕಾನ್ಸ್ಟೇಬಲ್ ಅರೆಸ್ಟ್

ಪೊಲೀಸ್ ಹೆಡ್‌ಕಾನ್ಸ್‌ಟೇಬಲ್‌ ಕಳ್ಳರ ಜೊತೆ ಕೈಜೋಡಿಸಿ, ಕದ್ದ ಮಾಲನ್ನೇ ತನ್ನ ಮನೆಗೆ ಸಾಗಿಸಿ ಲಕ್ಷ ಲಕ್ಷ ಲೂಟಿ ಮಾಡಿರುವ ಘಟನೆ ಬಳ್ಳಾರಿಯಲ್ಲಿ ಬೆಳಕಿಗೆ ಬಂದಿದೆ. ಬ್ರೂಸ್‌ಪೇಟೆ ಠಾಣೆಯ ಮೆಹಬೂಬ್ ಪಾಷಾ ಕಳ್ಳತನದಲ್ಲಿ ಭಾಗಿಯಾಗಿ ಸದ್ಯ ಬಂಧನಕ್ಕೊಳಗಾದ ಮುಖ್ಯಪೇದೆ.

ಇದೇ ಸೆಪ್ಟೆಂಬರ್‌ 12ರಂದು ಬೆಳಗ್ಗಿನ ಜಾವ ಬಳ್ಳಾರಿಯ ರಾಯದುರ್ಗಾ ಬಸ್ ನಿಲ್ದಾಣದ ಕಡೆ ಹೋಗ್ತಿರುವಾಗ ರಘು ಎನ್ನುವ ವ್ಯಕ್ತಿ ಕಣ್ಣಿಗೆ ಕಾರದ ಪುಡಿ ಎರಚಿ 22.99 ಲಕ್ಷ ರೂ. ನಗದು ಮತ್ತು 318 ಗ್ರಾಂ ಬಂಗಾರ ದರೋಡೆ ಮಾಡಲಾಗಿತ್ತು. ತೌಸೀಫ್, ಜಾವೀದ್, ಪೀರ್, ದಾದಾ ಖಲಂದರ್, ಮುಸ್ತಕಾ ಅಲಿ ರೆಹಮಾನ್, ಆರೀಫ್ 7 ಜನರಿಂದ ದರೋಡೆ ನಡೆದಿತ್ತು.

ಈ ದರೋಡೆ ಟೀಮ್ ಜೊತೆಗೆ ಸೇರಿ ಹೆಡ್ ಕಾನ್ಸ್‌ಟೇಬಲ್‌ ಮೆಹಬೂಬ್ ಪಾಷಾ ಹಣ ಕೊಳ್ಳೆ ಹೊಡೆದಿದ್ದ. ಈ ದರೋಡೆ ಗ್ಯಾಂಗ್‌ನ ಕಿಂಗ್ ಪಿನ್ ಆರೀಫ್‌ಗೆ ದರೋಡೆ ಮಾಡೋದಕ್ಕೆ ಬೈಕ್ ಕೊಟ್ಟು ಕಳಿಸಿದ್ದೇ ಈ ಹೆಡ್ ಕಾನ್ಸ್‌ಟೇಬಲ್ ಮೆಹಬೂಬ್ ಪಾಷಾ ಎಂದು ಹೇಳಲಾಗಿದೆ.

ಮೆಹಬೂಬ್ ಪಾಷಾ ಮತ್ತು ಪ್ರಮುಖ ಆರೋಪಿ ಅಸೀಫ್ ಆತ್ಮೀಯ ಗೆಳೆಯರು. ಆಸೀಫ್ ಈ ಹಿಂದೆ ಹೋಮ್ ಗಾರ್ಡ್ ಆಗಿ ಕೆಲಸದಿಂದ ವಜಾಗೊಂಡಿದ್ದ. ಈತನ ಜೊತೆ ಮೆಹಬೂಬ್ ಪಾಷಾ ನಿಕಟ ಸಂಪರ್ಕ ಹೊಂದಿದ್ದ. ಕಳ್ಳತನದ ಪ್ರಕರಣ ಸ್ಟೇಷನ್ ಮೆಟ್ಟಿಲು ಹತ್ತುತ್ತಿದ್ದಂತೆ ಪ್ರಕರಣದ ಅಸಲೀಯತ್ತು ಬಟಾಬಯಲಾಗಿದೆ.

ದರೋಡೆ ಮಾಡಿದ ಹಣದಲ್ಲಿ ಮೆಹಬೂಬ್ ಪಾಷಾ 9 ಲಕ್ಷ ಹಣ ಪಡೆದಿದ್ದ. ಸದ್ಯ ಮೆಹಬೂಬ್ ಪಾಷನಿಂದ 6.25 ಲಕ್ಷ ರೂ. ವಶಕ್ಕೆ ಪಡೆಯಲಾಗಿದ್ದು, ಬಂಧಿತ ಎಲ್ಲಾ ಆರೋಪಗಳಿಂದ ಒಟ್ಟು 15.91 ಲಕ್ಷ ನಗದು, 116 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಇನ್ನೂ ಕಳ್ಳತನದಲ್ಲಿ ತನ್ನ ಪಾಲಿನ ಬಗ್ಗೆ ಒಪ್ಪಿಕೊಂಡಿರುವ ಆರೋಪಿ ಹೆಡ್ ಕಾನಸ್ಟೇಬಲ್ ಮೆಹಬೂಬ್ ಪಾಷಾ ನನ್ನ ಬಂಧಿಸಿದ ನಂತರ, ಸೇವೆಯಿಂದ ಅಮಾನತು ಮಾಡಲಾಗಿದೆ. ಘಟನೆ ಸಂಬಂಧ ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Related posts

Leave a Comment