ಅಂಕೋಲಾ: ಅಪ್ರಾಪ್ತೆಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರಗೈದ ಅಪರಾಧಿಗೆ ಕಾರವಾರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 20 ವರ್ಷಗಳ ಕಠಿಣ ಕಾರಾಗೃಹವಾಸ ಶಿಕ್ಷೆ ಮತ್ತು 1 ಲಕ್ಷ ರೂ ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ. ಅಂಕೋಲಾ ತಾಲೂಕಿನ ಅಗಸೂರು ಜನತಾ ಕಾಲನಿ ನಿವಾಸಿ ಅಜೀತ ಎಚ್ ಪೆಡ್ನೇಕರ್ (29) ಶಿಕ್ಷೆಗೊಳಗಾದ ವಿವಾಹಿತ ವ್ಯಕ್ತಿ.
ಅಜಿತ್ ಎಂಬಾತ 2022ರಲ್ಲಿ , 17 ವರ್ಷದ ಅಪ್ರಾಪ್ತೆಯೊಂದಿಗೆ ಸ್ನೇಹ ಬೆಳೆಸಿ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ತನ್ನ ತಾಯಿ ಕರೆಯುವುದಾಗಿ ತನ್ನ ಮನೆಗೆ ಕರೆದುಕೊಂಡು ಬಂದಿದ್ದ. ಮನೆಯಲ್ಲಿ ಅತ್ಯಾಚಾರ ಎಸಗಿ ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಕೊಂದು ಹಾಕುವುದಾಗಿ ಜೀವ ಬೆದರಿಕೆ ಹಾಕಿದ್ದ.
nko
ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಬಾಲಕಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಪೊಲೀಸರು ಆರೋಪಿತನನ್ನು ಬಂಧಿಸಿ ಪೋಕ್ಸೋ ಪ್ರಕರಣ ದಾಖಲಿಸಿ ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪೀಠದ ನ್ಯಾಯಾಧೀಶೆ ಪ್ರತಿಭಾ ಕುಲಕರ್ಣಿ ಆರೋಪಿತನಿಗೆ 20 ವರ್ಷಗಳ ಕಠಿಣ ಕಾರಾಗೃಹವಾಸ ಶಿಕ್ಷೆ ಮತ್ತು 1ಲಕ್ಷ ರೂಪಾಯಿ ದಂಡ ಶಿಕ್ಷೆ ಪ್ರಕಟಿಸಿದ್ದು ದಂಡ ಪಾವತಿಸಲು ತಪ್ಪಿದಲ್ಲಿ 1 ವರ್ಷ ಜೈಲು ವಾಸ ಶಿಕ್ಷೆಯ ತೀರ್ಪು ನೀಡಿದ್ದಾರೆ. ಸರ್ಕಾರದ ಪರ ಸರ್ಕಾರಿ ಅಭಿಯೋಜಕಿ ತನುಜಾ ಹೊಸಪಟ್ಟಣ ವಾದಿಸಿದ್ದರು.
ಅಂದಿನ ತನಿಖಾಧಿಕಾರಿ ಪೊಲೀಸ್ ನಿರೀಕ್ಷಕ ಸಂತೋಷ ಶೆಟ್ಟಿ, ಪ್ರಕರಣದ ಮೇಲುಸ್ತುವಾರಿ ಅಧಿಕಾರಿ ಈಗಿನ ಅಂಕೋಲಾ ಪೊಲೀಸ್ ನಿರೀಕ್ಷಕ ಚಂದ್ರಶೇಖರ ಮಠಪತಿ, ಎ.ಎಸ್. ಐ ಮಹಾಬಲೇಶ್ವರ ಗಡೇರ,ಸಹಾಯಕ ಗುರುರಾಜ ನಾಯ್ಕ ಪ್ರಕರಣದ ಸಾಕ್ಷಿಯಾಗಿ ಸಹಕರಿಸಿದ್ದರು.