
ಏರೋ ಇಂಡಿಯಾ 2025ರ ಭದ್ರತೆಗೆ ನಿಯೋಜನೆಗೊಂಡಿರುವ ಕರ್ನಾಟಕ ಪೊಲೀಸರಿಗೆ ಆಹಾರ ಒದಗಿಸುವ ಹೊಣೆಯನ್ನು ಇದೀಗ ಸರ್ಕಾರ ಇಸ್ಕಾನ್ ಸಂಸ್ಥೆಗೆ ವಹಿಸಿದೆ. ಏರ್ ಶೋ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರಿಗೆ ನೀಡಿದ್ದ ಆಹಾರದಲ್ಲಿ ಜಿರಳೆ, ಹುಳ ಪತ್ತೆ ಆಗುತ್ತಿರುವ ಪ್ರಕರಣ ಮರುಕಳಿಸಿದ ಬೆನ್ನಲ್ಲೇ ಸರ್ಕಾರ ಈ ಕ್ರಮ ಕೈಗೊಂಡಿದೆ.
ಏರ್ ಶೋ ಭದ್ರತೆಗೆ ನಿಯೋಜಿಸಿದ್ದ ಪೊಲೀಸರಿಗೆ ಸೋಮವಾರ ನೀಡಿದ್ದ ಆಹಾರದಲ್ಲಿ ಹುಳ ಪತ್ತೆಯಾಗಿತ್ತು. ಈ ವಿಚಾರವಾಗಿ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದರ ಬೆನ್ನಲ್ಲೇ ಆಹಾರ ಪೂರೈಕೆಗೆ ಖಾಸಗಿ ಸಂಸ್ಥೆಗೆ ನೀಡಿದ್ದ ಗುತ್ತಿಗೆಯನ್ನು ಸರ್ಕಾರ ರದ್ದುಪಡಿಸಿದೆ.
ಪೊಲೀಸರಿಗೆ ಆಹಾರ ಒದಗಿಸುವ ಗುತ್ತಿಗೆಯನ್ನು ಎಂಬ ಖಾಸಗಿ ಕಂಪನಿಯೊಂದಕ್ಕೆ ವಹಿಸಲಾಗಿತ್ತು. ಈ ಕಂಪನಿ ಪೂರೈಸಿದ್ದ ಆಹಾರದಲ್ಲಿ ಜಿರಳೆ, ಹುಳ ಪತ್ತೆಯಾಗಿದ್ದವು. ಇದಕ್ಕೆ ಸಂಬಂಧಿಸಿದ ವಿಡಿಯೋ ಹಾಗೂ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು. ಇದರಿಂದ ಆಡಳಿತಕ್ಕೆ ಇರಿಸುಮುರಿಸು ಆಗಿದ್ದಲ್ಲದೆ, ಪೊಲೀಸ್ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ವಿಜೆ ಸಜಿತ್ ಹೇಳಿದ್ದು, ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಪೊಲೀಸ್ ಸಿಬ್ಬಂದಿಗೆ ನೀಡಿದ್ದ ಆಹಾರದಲ್ಲಿ ಜಿರಳೆ ಪತ್ತೆಯಾಗಿತ್ತು. ಅದರ ಬೆನ್ನಲ್ಲೇ, ಗುಣಮಟ್ಟದ ಆಹಾರ ನೀಡಲು ಕಮಿಷನರ್ ಸೂಚನೆ ನೀಡಿದ್ದರು. ಆದಾಗ್ಯೂ ಸೋಮವಾರ ಊಟದ ಜತೆ ನೀಡಿದ್ದ ಸಿಹಿ ತಿನಿಸಿನಲ್ಲಿ ಹುಳ ಪತ್ತೆಯಾಗಿತ್ತು. ಈ ಬಗ್ಗೆ ಪೊಲೀಸ್ ಸಿಬ್ಬಂದಿ ಬೇಸರ ವ್ಯಕ್ತಪಡಿಸಿದ್ದರು.
ಏಷ್ಯಾದ ಅತಿದೊಡ್ಡ ಏರ್ ಶೋ ಸೋಮವಾರ ಆರಂಭವಾಗಿದೆ. ಒಟ್ಟು ನಾಲ್ಕು ದಿನಗಳ ಕಾಲ ನಡೆಯಲಿರುವ ವೈಮಾನಿಕ ಪ್ರದರ್ಶನದಲ್ಲಿ ಮೊದಲ ಮೂರು ದಿನಗಳು ಉದ್ಯಮಕ್ಕೆ ಸಂಬಂಧಿಸಿದಾಗಿರುತ್ತವೆ. ಕೊನೆಯ ಎರಡು ದಿನಗಳು ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.