ಮಂಗಳೂರು : ಸುಮಾರು 30 ವರ್ಷಗಳ ಹಿಂದೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಎಂಆರ್ ಪಿಎಲ್ ಬಳಿಯಲ್ಲಿ ನಡೆದ ಕೊಲೆ ಹಾಗೂ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿ 30 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಸತತ ಕಾರ್ಯಾಚರಣೆ ಬಳಿಕ ಮಂಗಳೂರು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಕೇರಳದ ಕೊಟ್ಟಾರಕ್ಕರ ಕೊಲ್ಲಂ, ಕೈತಕೋಡ್ ನ ಕುರುವ ಮೂಲ ಹೌಸ್ ನಿವಾಸಿ ಜೋಸ್ ಕುಟ್ಟಿ ಪಾಪಚ್ಚನ್(55) ಎಂದು ಗುರುತಿಸಲಾಗಿದೆ.
ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳ ಗ್ರಾಮದಲ್ಲಿ ಎಂಆರ್ ಪಿಎಲ್ ಟೌನ್ ಶಿಪ್ ಸೈಟ್ ಪರಿಸರದಲ್ಲಿ 1995ರ ಮಾರ್ಚ್ 12ರಂದು ರಾತ್ರಿ 10:30 ಗಂಟೆ ಸುಮಾರಿಗೆ ಈ ಸೈಟ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ನಾರಾಯಣ ಅವರ ಜೊತೆ 2 ಮಂದಿ ಜಗಳ ಮಾಡಿ ಹಲ್ಲೆ ನಡೆಸಿದ್ದು, ಗಂಭೀರ ಗಾಯಗೊಂಡ ನಾರಾಯಣ ಅವರು ಕೊಲೆಯಾಗಿದ್ದರು.
ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್ನು 1995 ಮಾರ್ಚ್ 12ರಂದು ರಾತ್ರಿ ಮೇಲ್ಕಂಡ ಪ್ರಕರಣದ ಆರೋಪಿಗಳ ಪೈಕಿ ಅಚ್ಚನ್ ಕುಂಞ ಮತ್ತು ಜೋಸ್ ಕುಟ್ಟಿ ಎಂಬವರು ತೋಮಸ್ ಎಂಬವರಿಗೆ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆಯೂ ಅಚ್ಚನ್ ಕುಂಞ ಮತ್ತು ಜೋಸ್ ಕುಟ್ಟಿ ರವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಆರೋಪಿಗಳು ನಂತರ ತಲೆಮರೆಸಿಕೊಂಡಿದ್ದರು.
ಆರೋಪಿಗಳು ಕೇರಳಕ್ಕೆ ಹೋಗಿ ವಿವಿಧ ಕಡೆಗಳಲ್ಲಿ ಹಾಗೂ ಗುಜರಾತ್, ರಾಜಸ್ಥಾನ, ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದರು. ಆರೋಪಿಗಳ ವಿರುದ್ಧ ಎಲ್‌ಪಿಸಿ ವಾರಂಟ್ ಜಾರಿಯಲ್ಲಿತ್ತು. ಆರೋಪಿಗಳ ಪೈಕಿ ಅಚ್ಚನ್ ಕುಂಞ ಎಂಬಾತನು ಸುಮಾರು 8 ವರ್ಷದ ಹಿಂದೆ ಮೃತಪಟ್ಟಿದ್ದಾರೆ. ಇನ್ನೋರ್ವ ಆರೋಪಿ ಜೋಸ್ ಕುಟ್ಟಿ ಎಂಬಾತನ ಬಗ್ಗೆ ಸುಮಾರು 4 ತಿಂಗಳಿ0ದ ಮಾಹಿತಿ ಸಂಗ್ರಹಿಸಿದ ಮಂಗಳೂರು ಸಿಸಿಬಿ ಪೊಲೀಸರು ಅ. 23ರಂದು ಕೇರಳ ರಾಜ್ಯದ ಎರ್ನಾಕುಳಂ ಜಿಲ್ಲೆಯ ತ್ರಿಪ್ಪುಳಿತ್ತುರಂ ಎಂಬಲ್ಲಿ0ದ ದಸ್ತಗಿರಿ ಮಾಡಿ ಮುಂದಿನ ಕ್ರಮಕ್ಕಾಗಿ ಸುರತ್ಕಲ್ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.
A case of murder and assault in 1995, Accused arrested : Mangaluru CCB Police have succeeded in arresting an accused who was absconding for 30 years after being involved in the murder and assault case near MRPL under Suratkal Police Station about 30 years ago. The arrested accused has been identified as Jose Kutty Papachan (55).