
ವಿಮಾನದಿಂದ ಸ್ಕೈ ಡೈವಿಂಗ್ ತರಭೇತಿ ವೇಳೆ ಪ್ಯಾರಚೂಟ್ ತೆರೆದುಕೊಳ್ಳದ ಕಾರಣ ವಾಯುಪಡೆಯ ಅಧಿಕಾರಿಯೊಬ್ಬರು ಸಾವನಪ್ಪಿದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸಂಕೂರು ಮೂಲದ ಅಧಿಕಾರಿ ಜಿ.ಎಸ್ ಮಂಜುನಾಥ್ (36) ಮೃತಪಟ್ಟ ದುರ್ದೈವಿ.
ಆಗ್ರಾದಲ್ಲಿ ಭಾರತೀಯ ವಾಯು ಸೇನೆಗೆ ಸೇರಿದ ಮಾಲ್ಪುರ ಪ್ಯಾರಾಚೂಟ್ ಡ್ರಾಪ್ ಜೋನ್‌ನಲ್ಲಿ ತರಬೇತಿ ನಡೆಯುತ್ತಿತ್ತು. ವಾಯುಸೇನೆಯ 12 ಅಧಿಕಾರಿಗಳು ಪ್ಯಾರಾಚೂಟ್ ತರಬೇತಿಗೆ ವಿಮಾನದಿಂದ ಜಿಗಿದಿದ್ದರು. 11 ಮಂದಿ ಮಾತ್ರ ಪ್ಯಾರಾಚೂಟ್ ಬಳಸಿ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದರು. ಆದರೆ ವಾರಂಟ್ ಆಫೀಸರ್ ಜಿ.ಎಸ್. ಮಂಜುನಾಥ್ ನಾಪತ್ತೆಯಾಗಿದ್ದರು.
ಶೋಧ ಕಾರ್ಯ ನಡೆಸಿದಾಗ ಸಮೀಪದ ಜಮೀನಿನಲ್ಲಿ ಗಾಯಗೊಂಡ ಸ್ಥಿತಿಯಲ್ಲಿ ಮಂಜುನಾಥ್ ಪತ್ತೆಯಾಗಿದ್ದರು. ಕೂಡಲೆ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.