ಮೂಡಬಿದಿರೆ : ಖಾಸಗಿ ಬಸ್ ಗಳ ಓವರ್ ಟೇಕ್ ಭರಕ್ಕೆ ಸರಣಿ ಅಪಘಾತ ಸಂಭವಿಸಿ ಸ್ಕೂಟರ್ ನಲ್ಲಿದ್ದ ತಾಯಿ ಮಗಳು ಗಂಭೀರವಾಗಿ ಗಾಯಗೊಂಡ ಘಟನೆಗೆ ಸಂಭಂದಿಸಿದಂತೆ ಎಬಿವಿಪಿ ಪ್ರತಿಭಟನೆ ನಡೆಸಿದ್ದು, ಸದ್ಯ ಪ್ರತಿಭಟನೆಗೆ ಜಯ ಸಿಕ್ಕಿದೆ.
ಮಾಸ್ಟರ್ ಎಂಬ ಹೆಸರಿನ ಬಸ್ ಮೂಡುಬಿದಿರೆಯಿಂದ ಮಂಗಳೂರಿನತ್ತ ತೆರಳುತ್ತಿತ್ತು, ತೋಡಾರ್ ಮೈಟ್ ಕಾಲೇಜು ಎದುರು ಕಾಲೇಜು ಬಸ್ಸೊಂದನ್ನು ಓವರ್ ಟೇಕ್ ಮಾಡಲು ಬಸ್ ಚಾಲಕ ವಿಪರೀತ ವೇಗದಿಂದ ಬಸ್ಸನ್ನು ಮುನ್ನುಗ್ಗಿಸಿದ್ದು, ಕಾಲೇಜ್ ಬಸ್ ಗೆ ಡಿಕ್ಕಿ ಹೊಡೆದಿದೆ. ಬಳಿಕ ಎದುರಿನಲ್ಲಿ ಬರುತ್ತಿದ್ದ ತಾಯಿ ಮತ್ತು ಮಗಳಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಸ್ಕೂಟಿಯು ಅದರ ಎದುರಿನಲ್ಲಿದ್ದ ಆಟೊರಿಕ್ಷಾವೊಂದಕ್ಕೆ ಢಿಕ್ಕಿ ಹೊಡೆದಿದೆ.
ಘಟನೆಯಿಂದ ತಾಯಿಗೆ ಹಾಗೂ ಮಗಳಿಗೆ ಗಂಭೀರವಾಗಿ ಗಾಯವಾಗಿದೆ. ಅಪಘಾತದ ತಕ್ಷಣವೇ ಬಸ್ ಚಾಲಕ ಪರಾರಿಯಾಗಿದ್ದಾನೆ. ಘಟನೆಯಲ್ಲಿ ಗಾಯಗೊಂಡವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿತ್ತು.
ಬಸ್ಸಿನ ಅಜಾಗರೂಕತೆ ಚಾಲನೆ ವಿರುದ್ಧ ಸಿಟ್ಟಿಗೆದ್ದ ಎಬಿವಿಪಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಬಳಿಕ ಎಬಿವಿಪಿ ಕಾರ್ಯಕರ್ತರು ಪೊಲೀಸ್ ಠಾಣೆಗೂ ತೆರಳಿ ಆಕ್ರೋಶ ವ್ಯಕ್ತಪಡಿಸಿದ ಬಳಿಕ ಎಫ್ಐಆರ್ ದಾಖಲಾಗಿ, ವಿದ್ಯಾರ್ಥಿಗಳ ಆಗ್ರಹದಂತೆ ಘಟನೆಯಿಂದ ನೊಂದ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡಲಾಗಿದೆ.
ಎಬಿವಿಪಿ ಹಾಗೂ ಪರಿವಾರದ ಕಾರ್ಯಕರ್ತರ ಈ ಹೋರಾಟಕ್ಕೆ ಜಯ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.