Mangalore and Udupi news
ಉಡುಪಿಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತರಾಜ್ಯ

ಉಡುಪಿ: ಮುಖ್ಯಮಂತ್ರಿಗಳಿಗೆ ವಿಶ್ವವಿದ್ಯಾಲಯದ ಕುಲಾಧಿಪತಿ ಹುದ್ದೆ – ತೀವ್ರವಾಗಿ ಖಂಡಿಸಿದ ABVP

ಉಡುಪಿ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ನಗರ ವತಿಯಿಂದ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಾಧಿಪತಿ ಹುದ್ದೆಯನ್ನು ರಾಜ್ಯಪಾಲರ ಬದಲು ಮುಖ್ಯಮಂತ್ರಿಗಳಿಗೆ ನೀಡುತ್ತಿರುವ ಸರ್ಕಾರದ ನಡೆಯನ್ನು ಖಂಡಿಸಿ ಅಜ್ಜರಕಾಡು ಯುದ್ಧ ಸ್ಮಾರಕದ ಬಳಿ ಪ್ರತಿಭಟನೆಯನ್ನು ನಡೆಸಿ ತಹಶೀಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಆಗ್ರಹಿಸಲಾಯಿತು.

ನಗರ ಕಾರ್ಯದರ್ಶಿಯಾದ ಮಾಣಿಕ್ಯ ಭಟ್ ಮಾತನಾಡಿ ಶಿಕ್ಷಣದಲ್ಲಿ ರಾಜಕೀಯ ಹಸ್ತಕ್ಷೇಪ ಆಗುತ್ತಿರುವುದು ಖಂಡನೀಯ. ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರನ್ನು ಕಡೆಗಣಿಸಿ ಮುಖ್ಯಮಂತ್ರಿಗಳನ್ನು ವಿಶ್ವವಿದ್ಯಾಲಯಗಳ ಕುಲಪತಿಯನ್ನಾಗಿಸುವುದನ್ನು ವಿದ್ಯಾರ್ಥಿ ಸಮುದಾಯ ತೀವ್ರವಾಗಿ ವಿರೋಧಿಸುತ್ತದೆ ಎಂದರು. ಜಿಲ್ಲಾ ಸಂಚಾಲಕರಾದ ಕಾರ್ತಿಕ್ ಎಂ. ಮಾತನಾಡಿ ಈಗಾಗಲೇ ಅನೇಕ ಹಗರಣಗಳ ಆರೋಪಗಳನ್ನು ಹೆಗಲಮೇಲೇರಿಸಿಕೊಂಡ ಮುಖ್ಯಮಂತ್ರಿಗಳು ಶಿಕ್ಷಣ ಕ್ಷೇತ್ರದಲ್ಲಿಯೂ ರಾಜಕೀಯ ಹಸ್ತಕ್ಷೇಪವನ್ನು ನಡೆಸಿ ಕೆಳಮಟ್ಟದ ರಾಜಕೀಯ ನಡೆಸುತ್ತಿದ್ದಾರೆ ಇದನ್ನು ವಿದ್ಯಾರ್ಥಿ ಪರಿಷತ್ ತೀವ್ರವಾಗಿ ಖಂಡಿಸುತ್ತದೆ ಎಂದರು.

ಮಂಗಳೂರು ವಿಭಾಗ ಸಂಚಾಲಕರಾದ ಗಣೇಶ್ ಪೂಜಾರಿ ಮಾತನಾಡಿ ರಾಜ್ಯ ಸರ್ಕಾರದ ಕೆಲಸ ಏನೇ ಇದ್ದರೂ ಶಿಕ್ಷಣಕ್ಕೆ ಪೂರಕವಾಗಿ ಅನುದಾನ ಬಿಡುಗಡೆ ಮಾಡುವುದೇ ಹೊರತು ಇಲ್ಲಿನ ಆಡಳಿತ ವ್ಯವಸ್ಥೆಯನ್ನು ನೋಡಿಕೊಳ್ಳುವುದು ಅಲ್ಲ. ಇಂದು ನಾವು ಇಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಈ ಕೂಡಲೇ ಇಂತಹ ಯೋಚನೆಯನ್ನು ಕೈಬಿಡುವಂತೆ ಎಚ್ಚರಿಕೆಯನ್ನು ನೀಡುತ್ತಿದ್ದೇವೆ ಎಂದರು.

ಪ್ರತಿಭಟನೆಯಲ್ಲಿ ಕರ್ನಾಟಕ ದಕ್ಷಿಣ ಪ್ರಾಂತ ಸಾಮಾಜಿಕ ಜಾಲತಾಣ ಸಹ ಸಂಚಾಲಕರಾದ ಶ್ರೀವತ್ಸ ಡಿ ಗಾಂವ್ಸ್‌ಕರ್, ಪ್ರಾಂತ ಕಾರ್ಯಕಾರಿಣಿ ಸದಸ್ಯರಾದ ಸಂಹಿತಾ ಕೆ. ನಗರ ಸಹ ಕಾರ್ಯದರ್ಶಿ ಶಿವನ್ ಮತ್ತು ಪ್ರಮುಖರಾದ ಕಿಶೋರ್, ನವೀನ್, ಅಭಿಲಾಷ್, ಮನೀಶ್, ರಕ್ಷಿತಾ ಉಪಸ್ಥಿತರಿದ್ದರು.

Related posts

Leave a Comment