
ಮಂಗಳೂರು : ನಾಡಿನ ವಿಭಿನ್ನ ಕಲೆ-ಸಂಸ್ಕೃತಿಗಳನ್ನು ಶಾಲಾ ಮಕ್ಕಳಿಗೆ ಪರಿಚಯಿಸುವ ನಿಟ್ಟಿನಲ್ಲಿ ಶಾಲೆಗಳಲ್ಲಿ ರಂಗೋತ್ಸವ ಎಂಬ ಮನರಂಜನಾ ಕಾರ್ಯಕ್ರಮದ ಅನುಷ್ಠಾನಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದ್ದು ಬೊಂಬೆಯಾಟ, ಕೋಲಾಟ ಮುಂತಾದ ಮನೋರಂಜನಾ ಕಲೆಗಳ ಸಾಲಿಗೆ ಭೂತಾರಾಧನೆ ಸೇರಿಸಿರುವುದು ಖಂಡನೀಯ ಎಂದು ಶಾಸಕ ವೇದವ್ಯಾಸ ಕಾಮತ್ ರವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ದೈವರಾಧನೆ ಎನ್ನುವುದು ಸಾವಿರಾರು ವರ್ಷಗಳಿಂದಲೂ ತುಳುನಾಡಿನ ಶ್ರದ್ಧಾ ಭಕ್ತಿಯ ಇತಿಹಾಸ ಹೊಂದಿರುವ ಧಾರ್ಮಿಕ ಆಚರಣೆಯಾಗಿದೆ ಹೊರತು ಅದು ಯಾವುದೇ ಮನೋರಂಜನೆಯ ಕಲೆಯಲ್ಲ. ಮಕ್ಕಳಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಮೋಜು ಮಸ್ತಿಗಳಿಂದ ಕೂಡಿದ ಪ್ರತಿಭಾ ಕಾರಂಜಿಗಳಿಗೆ ನಮ್ಮ ವಿರೋಧವಿಲ್ಲ. ಆದರೆ, ದೈವಗಳು ವೇದಿಕೆಯ ಮೇಲೆ ನರ್ತನ ಮಾಡಿ ತೋರಿಸುವಂತಹ ವಸ್ತುವಲ್ಲ ಎಂಬ ಕನಿಷ್ಠ ಜ್ಞಾನವೂ ಈ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲವೇ? ಇದು ಖಂಡಿತವಾಗಿಯೂ ಬೇಜವಾಬ್ದಾರಿ ನಡೆಯಾಗಿದ್ದು ಸಮಸ್ತ ತುಳುನಾಡಿನ ದೈವಭಕ್ತರುಗಳ ನಂಬಿಕೆಗೆ ಧಕ್ಕೆಯಾಗಿದೆ ಎಂದರು.
ಈ ಹಿಂದೆಯೇ ಹಲವು ಸುತ್ತೋಲೆಗಳನ್ನು ಹೊರಡಿಸಿ ಭೂತಾರಾಧನೆ ವಿಷಯದಲ್ಲಿ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಉಲ್ಲೇಖಿಸಲಾಗಿದ್ದರೂ ಸರ್ಕಾರವೇ ಇಂತಹ ಆದೇಶ ಹೊರಡಿಸುತ್ತಾರೆಂದರೆ ಇದು ಉದ್ದೇಶಪೂರ್ವಕವಲ್ಲದೇ ಮತ್ತೇನು? ತುಳುನಾಡಿನ ಆಚಾರ ವಿಚಾರಗಳಿಗೆ ಕಿಂಚಿತ್ತು ಧಕ್ಕೆಯಾದರೂ ನಾವು ಸಹಿಸುವುದಿಲ್ಲ ಎಂದು ಎಚ್ಚರಿಸುತ್ತಾ ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕೆಂದು ಶಾಸಕರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದರು.