ಉಳ್ಳಾಲ : ಸೋಮೇಶ್ವರ ಉಚ್ಚಿಲ ಬಳಿಯ ಸಮುದ್ರ ತೀರದ ಪಾಳು ಬಾವಿಗೆ ಮೀನುಗಾರರೋರ್ವರು ಆಯತಪ್ಪಿ ಬಿದ್ದು ಸಾವನ್ನಪ್ಪಿರುವ ಘಟನೆ ಸೋಮೇಶ್ವರ ಉಚ್ಚಿಲ ಬೀಚ್ ಬಳಿ ನಡೆದಿದೆ.
ಉಚ್ಚಿಲ ನಿವಾಸಿ ಶಶೀಂದ್ರ ಎಂ. ಉಚ್ಚಿಲ್ (75)ಮೃತಪಟ್ಟ ಮೀನುಗಾರ.
ಶಶೀಂದ್ರ ಎಂ. ಉಚ್ಚಿಲ್ ಅವರು ಮೀನುಗಾರಿಕೆ ವೃತ್ತಿ ನಡೆಸುತ್ತಿದ್ದಾರೆ. ಮಂಗಳವಾರ ಸಂಜೆ ಸ್ನೇಹಿತನೊಂದಿಗೆ ವಾಸ್ಕೋ ರೆಸಾರ್ಟ್ ಮುಂಭಾಗದ ಪಾಳುಬಿದ್ದ ಬಾವಿಯ ಕಟ್ಟೆಯಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದರು. ಈ ವೇಳೆ ಶಶೀಂದ್ರ ಅವರು ಆಯತಪ್ಪಿ ಬಾವಿಯೊಳಗೆ ತಲೆಕೆಳಗಾಗಿ ಬಾವಿಗೆ ಬಿದ್ದಿದ್ದಾರೆ. ಬಾವಿಯಲ್ಲಿ ಕೇವಲ ಮೂರು ಅಡಿಯಷ್ಟು ನೀರಿದ್ದ ಪರಿಣಾಮ ತಲೆಗೆ ನೆಲ ಬಡಿದು ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ.
ತಕ್ಷಣ ಸ್ಥಳೀಯರೆ ಮೃತದೇಹವನ್ನು ಬಾವಿಯಿಂದ ಮೇಲಕ್ಕೆತ್ತಿದ್ದಾರೆ. ಶಶೀಂದ್ರ ಅವರ ಪತ್ನಿ ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆ ಸೇರಿದ್ದು ಬುಧವಾರ ಅವರಿಗೆ ಶಸ್ತ್ರಚಿಕಿತ್ಸೆ ನಡೆಸುವ ತಯಾರಿ ನಡೆದಿತ್ತು ಎಂದು ತಿಳಿದುಬಂದಿದೆ.
