ಉದ್ಯಮಿಯೊಬ್ಬರಿಗೆ ೨೫ ಕೋಟಿ ರೂ. ಆಸೆ ತೋರಿಸಿ, ಬರೋಬ್ಬರಿ ೫.೭೫ ಕೋಟಿ ರೂ. ವಂಚಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ರೇಖಾ ಎಂಬಾಕೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸಾಲ ಕೊಡಿಸುವ ನೆಪದಲ್ಲಿ ರೇಖಾ ಆನೇಕ ಜನರಿಗೆ ನೂರಾರು ಕೋಟಿ ವಂಚನೆ ಮಾಡಿರುವುದು ಬಯಲಾಗಿದೆ.
2023ರಲ್ಲಿ ಉದ್ಯಮಿಗೂ ಮತ್ತು ರೇಖಾಗೂ ಪರಿಚಯವಾಗುತ್ತದೆ. ಕಾರ್ಲ್ಟನ್ ಟವರ್ ಬೆಂಕಿ ದುರಂತದ ಕತೆ ಹೇಳುವ ಮೂಲಕ ಮೋಸದ ಜಾಲ ಬೀಸಿದ ರೇಖಾ, ನಾನು ಟವರ್ ದುರಂತದ ಪ್ರತ್ಯಕ್ಷ ಸಾಕ್ಷಿ, ನಾನು ಸಾಕ್ಷಿ ಹೇಳದಂತೆ ಮಾಲೀಕರು ಆಫರ್ ಮಾಡಿದ್ದಾರೆ. 25 ಕೋಟಿ ರೂ. ಕೊಡುತ್ತೇನೆ ಅಂದಿದ್ದಾರೆ. ನನ್ನ ಖಾತೆಯಲ್ಲಿದ್ದ 6 ಕೋಟಿ ರೂ. ಇದೆ. ಹೀಗಾಗಿ, ಇಡಿ ಮತ್ತು ಐಟಿ ನನ್ನ ಖಾತೆ ಸೀಜ್ ಮಾಡಿವೆ. ಆದರೆ, ಹಣ ರಿಲೀಸ್ ಮಾಡಿಸಲುಕೆ ನನಗೆ ಹಣ ಬೇಕಾಗಿದೆ ಅಂತ ಉದ್ಯಮಿಯನ್ನು ನಂಬಿಸಿ 5.75 ಕೋಟಿ ರೂ. ಪಡೆದಿದ್ದಾಳೆ.
ರೇಖಾ ವಂಚನೆಯ ಜಾಲ ಇಷ್ಟಕ್ಕೆ ನಿಲ್ಲುವುದಿಲ್ಲ. ವಿಚಾರಣೆ ವೇಳೆ ಮತ್ತಷ್ಟು ಬಯಲಾಗಿದೆ. ಶೇರ್ಚಾಟ್ಮೂಲಕ ಇಂಜಿನಿಯರ್ಗೆ ರೇಖಾ ವಂಚಿಸಿದ್ದಾಳೆ. ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸಿ, ಇಂಜಿನಿಯರ್ ಬಳಿಯಿಂದ 31.10 ಲಕ್ಷ ಹಣ ವಸೂಲಿ ಮಾಡಿದ್ದಾಳೆ. ಈ ಸಂಬಂಧ ಬೆಂಗಳೂರಿನ ಬಸವನಗುಡಿ ಠಾಣೆಯಲ್ಲಿ ಇಂಜಿನಿಯರ್ ದೂರು ನೀಡಿದ್ದಾರೆ. ಕಳೆದ ಡಿಸೆಂಬರ್ನಲ್ಲಿ ದೂರು ನೀಡಿದ್ದು ಪೊಲೀಸರು ತನಿಖೆ ನಡೆಸುತ್ತಿರುವಾಗಲೇ, ರೇಖಾ ಮುಂಬೈನಲ್ಲೇ ಕೂತು ನಿರೀಕ್ಷಣಾ ಜಾಮೀನು ಪಡೆದಿದ್ದಳು.
ಮಾಜಿ ಶಾಸಕ ರಾಜೂಗೌಡ ಹೆಸರಿನಲ್ಲೂ ವಂಚನೆ ಮಾಡಿರುವುದು ಪತ್ತೆಯಾಗಿದೆ. 2018ರಲ್ಲಿ ಶಾಸಕರಾಗಿದ್ದ ರಾಜುಗೌಡ ಹೆಸರೇಳಿ ಯಾದಗಿರಿಯಲ್ಲಿ ವಂಚನೆ ಮಾಡಿದ್ದಾಳೆ. ಕೆಲಸ ಕೊಡಿಸುವ ನೆಪದಲ್ಲಿ ಬೆಂಗಳೂರಿನಲ್ಲಿದ್ದ ಸುರಪುರದ ವ್ಯಕ್ತಿಯೊಬ್ಬರಿಗೆ ಪಂಗನಾಮ ಹಾಕಿದ್ದಳು. ಅಂದು ರಾಜುಗೌಡ ದೂರಿನ ಮೇರೆಗೆ ರೇಖಾಳನ್ನ ಅರೆಸ್ಟ್ ಮಾಡಲಾಗಿತ್ತು.
ಇನ್ನು ಪ್ರಕರಣ ಸಂಬಂಧ ಪೊಲೀಸ್ ಕಮಿಷನರ್ ಬಿ.ದಯಾನಂದ್ ಮಾತನಾಡಿ, 6 ಕೋಟಿ ಹಣ ಪಡೆದು ವಂಚಿಸಿದ್ದ ಮೂವರನ್ನು ಸಿಸಿಬಿ ಬಂಧಿಸಿದೆ. ಕಾರ್ಲಟನ್ ಟೌನ್ ಹೆಸರಲ್ಲಿ ಕಥೆ ಸೃಷ್ಟಿಸಿ 7 ಲಕ್ಷ ರೂ. ಕೇಳಿದ್ದಳು. ಬಳಿಕ ಹಂತಹಂತವಾಗಿ 5.75 ಕೋಟಿ ರೂ. ಪಡೆದುಕೊಂಡಿದ್ದಳು. ಪ್ರಕರಣ ಸಂಬಂಧ ಮಹಿಳೆ ಸೇರಿ ಮೂವರ ಆರೋಪಿಗಳ ಬಂಧನವಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ ಎಂದರು.
ಬಸವನಗುಡಿ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೂ ಬಯಲಾಗಿದೆ. ಆರೋಪಿತೆಯ ಬ್ಯಾಂಕ್ ಖಾತೆಯಿಂದ 24 ಕೋಟಿ ರೂ. ವ್ಯವಹಾರ ಆಗಿದೆ. ಆರೋಪಿ ಮಹಿಳೆಯ ಬ್ಯಾಂಕ್ ಖಾತೆಯನ್ನು ಫ್ರೀಜ್ ಮಾಡಲಾಗಿದೆ. ಆಕೆ ವಿರುದ್ಧ 5 ವಂಚನೆ ಕೇಸ್, ಚೆಕ್ ಬೌನ್ಸ್ ಕೇಸ್ ದಾಖಲಾಗಿದೆ. ಆಕೆಯ ಪತಿ ಮತ್ತು ಮತ್ತೊಬ್ಬ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿಸಿದರು.
