ಉಡುಪಿ ಮಾರ್ಚ್ 12: ಕೆಲವು ದಿನಗಳ ಹಿಂದೆ ಮಣಿಪಾಲ ಪೊಲೀಸರು ಹಾಗೂ ನೆಲಮಂಗಲದ ಪೊಲೀಸರಿಂದ ತಪ್ಪಿಸಿಕೊಂಡಿದ್ದ ಗರುಡ ಗ್ಯಾಂಗ್ ಸದಸ್ಯ ಇಸಾಕ್ ಗೆ ಪೊಲೀಸರು ಗುಂಡಿನ ರುಚಿ ತೋರಿಸಿದ್ದಾರೆ. ಹಿರಿಯಡ್ಕದಲ್ಲಿ ಪೊಲೀಸರಿಂದ ಮತ್ತೆ ತಪ್ಪಿಸಿಕೊಳ್ಳಲು ಯತ್ನಿಸಿದ ಇಸಾಕ್ ಕಾಲಿಗೆ ಪೊಲೀಸರು ಪೈರಿಂಗ್ ಮಾಡಿದ್ದಾರೆ.
ಇತ್ತೀಚಿಗೆ ಬೆಂಗಳೂರು ಪೊಲೀಸರಿಂದ ತಪ್ಪಿಸಿಕೊಂಡು ಬಂದಿದ್ದ ಇಸಾಕ್ ಮಣಿಪಾಲದಲ್ಲಿ ಕಾಣಿಸಿಕೊಂಡಿದ್ದ. ದರೋಡೆ ಪ್ರಕರಣವೊಂದರ ಸಂಬಂಧ ಮಣಿಪಾಲ ಪೊಲೀಸರು ಇಸಾಕ್ ಬೆನ್ನು ಹತ್ತಿದ್ದರು. ಆದರೆ ಪೊಲೀಸರಿಂದ ತಪ್ಪಿಸಿಕೊಳ್ಳುವ ವೇಳೆ ಅಪಘಾತ ಮಾಡಿದ್ದ ಇಸಾಕ್, ಬಳಿಕ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದ. ಆತನ ಶೋಧ ಕಾರ್ಯದಲ್ಲಿ ಪೊಲೀಸರು ತೊಡಗಿಕೊಂಡಿದ್ದರು.
ಈ ನಡುವೆ ಇಂದು ಮಧ್ಯಾಹ್ನ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಆರೋಪಿ ಇಸಾಕ್ ಸೇರಿದಂತೆ ಒಟ್ಟು ನಾಲ್ಕು ಜನರನ್ನು ಮಣಿಪಾಲದ ಪೊಲೀಸ್ ತಂಡ ಅರೆಸ್ಟ್ ಮಾಡಿದೆ. ಬಳಿಕ ಆರೋಪಿಗಳನ್ನು ಚನ್ನರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಿಂದ ಮಣಿಪಾಲಕ್ಕೆ ಕರೆತರುವ ವೇಳೆ ಉಡುಪಿ ಜಿಲ್ಲೆಯ ಹಿರಿಯಡಕ ಪೊಲೀಸ್ ಠಾಣಾ ವ್ಯಾಪ್ತಿಯ ಗುಡ್ಡೆ ಅಂಗಡಿ ಬಳಿ ಸಂಜೆ ಸಂದರ್ಭ ಆರೋಪಿ ಇಸಾಕ್ ಮೂತ್ರ ವಿಸರ್ಜನೆ ನೆಪದಲ್ಲಿ ಪರಾರಿಯಾಗಲು ಯತ್ನಿಸಿದ್ದಾನೆ. ಪೊಲೀಸರಿಂದ ತಪ್ಪಿಸಿಕೊಳ್ಳುವ ಬರದಲ್ಲಿ ಮಣಿಪಾಲದ ಪೊಲೀಸ್ ಸಿಬ್ಬಂದಿಗೂ ಹಲ್ಲೆ ಮಾಡಿದ್ದಾನೆ. ಈ ವೇಳೆ ಪೊಲೀಸರು ಆರೋಪಿ ಕಾಲಿಗೆ ಫೈರಿಂಗ್ ಮಾಡಿದ್ದಾರೆ. ಸದ್ಯ ಗಾಯಗೊಂಡ ಇಸಾಕ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.