Mangalore and Udupi news
ಅಪರಾಧದಕ್ಷಿಣ ಕನ್ನಡಮಂಗಳೂರು

ಮಂಗಳೂರು ವಿಶ್ವವಿದ್ಯಾಲಯದ ಬಹುದೊಡ್ಡ ಸ್ಕ್ಯಾಮ್ ಬಯಲು…!?

7 ಕೋಟಿ ರೂ. ಖರ್ಚು ಮಾಡಿ ನಿರ್ಮಿಸಿದ ಎರಡು ಹಾಸ್ಟೆಲ್‌ಗಳು ಕಣ್ಮರೆಯಾಗಿರುವ ಘಟನೆ ಮಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆದಿದೆ. ತಜ್ಞರ ಸಮಿತಿ ಪರಿಶೀಲನೆಗೆ ತೆರಳಿದ್ದ ವೇಳೆ ಈ ಘಟನೆ ಬಹಿರಂಗವಾಗಿದ್ದು, ತೀವ್ರ ವಿವಾದಕ್ಕೆ ಕಾರಣವಾಗಿದೆ. ವಿಶ್ವಿವಿದ್ಯಾಲಯವು ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಡೆಕ್ಕನ್ ಹೆರಾಲ್ಡ್ (DH) ವರದಿ ಮಾಡಿದೆ.

ರಾಷ್ಟ್ರೀಯ ಉಚ್ಛತರ್ ಶಿಕ್ಷಾ ಅಭಿಯಾನ (RUSA-1) ಅಡಿಯಲ್ಲಿ ಬಾಲಕ ಮತ್ತು ಬಾಲಕಿಯರ ಹಾಸ್ಟೆಲ್‌ಗಳ ನಿರ್ಮಾಣಕ್ಕಾಗಿ ಪಡೆದ 7 ಕೋಟಿ ರೂ.ಗಳನ್ನು ಮಂಗಳೂರು ವಿಶ್ವವಿದ್ಯಾಲಯ ದುರುಪಯೋಗಪಡಿಸಿಕೊಂಡಿದೆ ಎಂದು ಪತ್ರಿಕೆ ವರದಿ ಮಾಡಿದೆ. ನಿಧಿ ಬಳಕೆಯ ಪರಿಶೀಲನೆಗಾಗಿ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿಯು ರಚಿಸಿದ ತಜ್ಞರ ಸಮಿತಿಯ ಭೇಟಿಯ ವೇಳೆ ಇದು ಬಹಿರಂಗವಾಗಿದೆ.

ವಿಶ್ವವಿದ್ಯಾಲಯ ಆವರಣದಲ್ಲಿ ಯಾವುದೇ ಹಾಸ್ಟೆಲ್ ಕಟ್ಟಡಗಳು ಕಾಣಿಸದಿದ್ದರಿಂದ ಪರಿಶೀಲನೆಗಾಗಿ ತೆರಳಿದ್ದ ತಜ್ಞರ ಸಮಿತಿ ಆಘಾತಕ್ಕೊಳಗಾಯಿತು ಎಂದು ವರದಿ ಉಲ್ಲೇಖಿಸಿದೆ. ಈ ವೇಳೆ ಸಮಿತಿಯು ಅಧಿಕಾರಿಗಳನ್ನು ದಾಖಲೆಗಳನ್ನು ನೀಡುವಂತೆ ಒತ್ತಾಯಿಸಿದಾಗ, ಅಧಿಕಾರಿಗಳು “ಅಂತರರಾಷ್ಟ್ರೀಯ ಹಾಸ್ಟೆಲ್” ನಿರ್ಮಾಣಕ್ಕಾಗಿ ಹಣವನ್ನು ಬೇರೆಡೆಗೆ ತಿರುಗಿಸಲಾಗಿದೆ ಎಂದು ಹೇಳುವ ಮೂಲಕ ಸಮಿತಿಯನ್ನು “ತಪ್ಪುದಾರಿಗೆಳೆಯಲು” ಪ್ರಯತ್ನಿಸಿದರು ಎಂದು ಡೆಕ್ಕನ್ ಹೆರಾಲ್ಡ್‌ ವರದಿ ತಿಳಿಸಿದೆ.

ಕುತೂಹಲಕಾರಿ ವಿಚಾರ ಏನೆಂದರೆ, ಉನ್ನತ ಶಿಕ್ಷಣ ಇಲಾಖೆಗೆ ಸಲ್ಲಿಸಿದ ಬಳಕೆಯ ಪ್ರಮಾಣಪತ್ರದಲ್ಲಿ, ವಿಶ್ವವಿದ್ಯಾಲಯವು ಎರಡು ಹಾಸ್ಟೆಲ್‌ಗಳನ್ನು ನಿರ್ಮಿಸಿದೆ ಎಂದು ಹೇಳಿಕೊಂಡಿದೆ.

ಘಟನೆ ಹಿನ್ನಲೆ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಯೋಜನಾ ನಿರ್ದೇಶಕರ (SPD) ಸಭೆಯ ಮುಂದೆಯೂ ಇಡಲಾಯಿತು. ಈ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡ ನಂತರ ವಿಶ್ವವಿದ್ಯಾಲಯ ಅಧಿಕಾರಿಗಳಿಗೆ ಶೋ-ಕಾಸ್ ನೋಟಿಸ್ ನೀಡಲಾಗಿದ್ದು, ಆದಾಗ್ಯೂ, ನೀಡಲಾದ ವಿವರಣೆಯು ತೃಪ್ತಿಕರವಾಗಿಲ್ಲ ಎಂದು ಇಲಾಖೆಯ ಮೂಲಗಳು ತಿಳಿಸಿವೆ ಎಂದು DH ವರದಿ ಹೇಳಿದೆ.

“ವಿಶ್ವವಿದ್ಯಾನಿಲಯವು ದುರುಪಯೋಗಪಡಿಸಿಕೊಂಡ ಹಣವನ್ನು ವಸೂಲಿ ಮಾಡಲು ಮತ್ತು ದಂಡ ವಿಧಿಸಲು ಉನ್ನತ ಶಿಕ್ಷಣ ಮಂಡಳಿ ಶಿಫಾರಸು ಮಾಡಿದೆ. ಹೊಸ ಕಾರ್ಯದರ್ಶಿ ಈಗ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ ಮತ್ತು ನಾವು ಈ ವಿಷಯವನ್ನು ಅವರ ಮುಂದೆ ಇಡುತ್ತೇವೆ” ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಇಲಾಖೆಯ ಅಧಿಕಾರಿಗಳು ವಿವರಿಸಿದಂತೆ, RUSA ಅಡಿಯಲ್ಲಿ ಬಿಡುಗಡೆಯಾದ ಹಣವನ್ನು ಅವುಗಳನ್ನು ಹಂಚಿಕೆ ಮಾಡಿದ ಉದ್ದೇಶಕ್ಕಾಗಿ ಮಾತ್ರ ಬಳಸಬೇಕು. RUSA ನಿಧಿಯ ಶೇಕಡಾ 60 ರಷ್ಟು ಕೇಂದ್ರದಿಂದ ಬಂದಿದ್ದರೆ, ರಾಜ್ಯವು ಉಳಿದ ಶೇಕಡಾ 40 ರಷ್ಟು ಕೊಡುಗೆ ನೀಡುತ್ತದೆ.

RUSA-1 ಅನ್ನು 2013 ಮತ್ತು 2017 ರ ನಡುವೆ ಜಾರಿಗೆ ತರಲಾಯಿತು. ಹಣವನ್ನು ಹಂಚಿಕೆ ಮಾಡಿದ ಯೋಜನೆಗಳು ಪೂರ್ಣಗೊಂಡ ನಂತರ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ಬಳಕೆಯ ಪ್ರಮಾಣಪತ್ರವನ್ನು ಸಲ್ಲಿಸಲು ಕೇಳಲಾಯಿತು. ಮಂಗಳೂರು ವಿಶ್ವವಿದ್ಯಾಲಯಕ್ಕೆ ಮಂಜೂರು ಮಾಡಲಾದ 7 ಕೋಟಿ ರೂ.ಗಳಲ್ಲಿ, 3.5 ಕೋಟಿ ರೂ. ಬಾಲಕರ ಹಾಸ್ಟೆಲ್ ನಿರ್ಮಾಣಕ್ಕಾಗಿ ಮತ್ತು 3.5 ಕೋಟಿ ರೂ. ಬಾಲಕಿಯರ ಹಾಸ್ಟೆಲ್‌ಗಾಗಿ ಖರ್ಚು ಮಾಡಬೇಕಿತ್ತು.

Related posts

Leave a Comment