Mangalore and Udupi news
ದಕ್ಷಿಣ ಕನ್ನಡಮಂಗಳೂರು

ಏಪ್ರಿಲ್ ನಂತರ ಇತಿಹಾಸದ ಪುಟ ಸೇರಲಿದೆ ಮಂಗಳೂರಿನ ಪ್ರತಿಷ್ಠಿತ 5 ಸ್ಟಾರ್ ಹೋಟೆಲ್ “ಮೋತಿ ಮಹಲ್”

ಮಂಗಳೂರು : ಮಂಗಳೂರಿನವರಿಗೆ ಹೋಟೆಲ್ ಮೋತಿಮಹಲ್ ಎನ್ನುವುದು ಒಂದು ರೀತಿಯ ಲ್ಯಾಂಡ್ ಮಾರ್ಕ್ ಜೊತೆ ಐಡೆಂಟಿಟಿ ಮಂಗಳೂರಿನ ಮೊದಲ ಬಹುಮಹಡಿ ಐಷಾರಾಮಿ ಹೋಟೆಲ್ ಎಂದು ಹೆಸರು ಮಾಡಿದ್ದ ಮೋತಿ ಮಹಲ್ ಹೋಟೆಲ್ ಎಪ್ರಿಲ್ ನಂತರ ಬಂದ್ ಆಗಲಿದೆ ಎಂದು ಹೇಳಲಾಗಿದೆ.

1983ರಲ್ಲಿ ಆರಂಭವಾದ ಫೈವ್‌ ಸ್ಟಾರ್‌ ಹೋಟೆಲ್‌ ಮೋತಿ ಮಹಲ್‌ ಶೀಘ್ರ ಕಾರ್ಯಾಚರಣೆ ನಿಲ್ಲಿಸಲಿದ್ದು, ಇನ್ನು ಇತಿಹಾಸದ ಪುಟ ಸೇರಲಿದೆ. ಮಿಲಾಗ್ರಿಸ್ ಚರ್ಚ್ ಮತ್ತು ಹೊಟೇಲ್ ಮಾಲಕರ ಭೂ ವಿವಾದಕ್ಕೆ ಕೊನೆಗೂ ಅಂತಿಮ ಮುದ್ರೆ ಬಿದ್ದಿದೆ. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ಹೋಟೆಲ್ ಮೋತಿಮಹಲನ್ನು ಇದ್ದ ರೀತಿಯಲ್ಲೇ ಜಮೀನಿನ ಮೂಲ ಮಾಲಕರಾದ ಮಿಲಾಗ್ರಿಸ್ ಚರ್ಚ್ ಆಡಳಿತಕ್ಕೆ ಬಿಟ್ಟುಕೊಡಬೇಕಿದೆ. ಇದಲ್ಲದೆ, ಕೋರ್ಟ್ ಜಟಾಪಟಿಗೆ ತಗಲಿದ ಖರ್ಚು 3 ಕೋಟಿ ರೂ.ವನ್ನು ಪರಿಹಾರ ರೂಪದಲ್ಲಿ ಪಾವತಿಸಬೇಕಾಗಿದೆ.

ಬೆಳೆಯುತ್ತಿರುವ ಮಹಾನಗರ ಮಂಗಳೂರಿಗೆ ದೇಶ-ವಿದೇಶಗಳಿಂದ ಉದ್ಯಮಿಗಳು, ಪ್ರವಾಸಿಗರು, ಹಿರಿಯ ಅಧಿಕಾರಿಗಳು ಬಂದಾಗ ಅವರ ನಿರೀಕ್ಷೆಯ ಐಷಾರಾಮಿ ಹೋಟೆಲ್‌ ಬೇಕೆನ್ನುವ ಉದ್ದೇಶದೊಂದಿಗೆ ಉದ್ಯಮಿ ಎ.ಜೆ. ಶೆಟ್ಟಿ ಅವರು ಈ ಹೋಟೆಲ್‌ ಅನ್ನು ಸ್ಥಾಪಿಸಿದ್ದರು. ಆ ಕಾಲದ ಅತೀ ದೊಡ್ಡ ಹೋಟೆಲ್‌ ಇದಾಗಿತ್ತು. ಐಷಾರಾಮಿ ಸೂಟ್‌ ರೂಮುಗಳು, 100ಕ್ಕೂ ಅಧಿಕ ರೂಮುಗಳು, ಪಾರ್ಟಿ ಹಾಲ್‌ಗಳು, ಕನ್ವೆನ್ಶನ್‌ ಹಾಲ್‌ಗಳು ಇಲ್ಲಿವೆ. ಮಂಗಳ ಮಲ್ಟಿ ಕಸಿನ್ ರೆಸ್ಟೋರೆಂಟ್, ಮಧುವನ್ ವೆಜ್ ರೆಸ್ಟೋರೆಂಟ್, ಮೆಕ್ಸಿಲ್ ಬಾರ್. ತೈಚಿನ್ ಚೈನೀಸ್ ರೆಸ್ಟೋರೆಂಟ್, ಮೋತಿ ಸ್ವೀಟ್ಸ್ ಶೀತಲ್ ಹೆಸರಿನ ಈಜುಕೊಳ ಹೊಂದಿದ್ದ ಹೋಟೆಲ್ ಮೋತಿಮಹಲ್ ಮಂಗಳೂರಿನ ಪ್ರಪ್ರಥಮ ಲಕ್ಸುರಿ ಹೋಟೆಲ್ ಆಗಿ ಪ್ರಸಿದ್ದಿ ಪಡೆದಿತ್ತು. ಹಾಲ್ ಕೂಡ ಇದ್ದುದರಿಂದ ಮದುವೆ ಸಮಾರಂಭಗಳ ಜೊತೆಗೆ ದೊಡ್ಡ ಕಂಪೆನಿಗಳ ಸಮ್ಮೇಳನವೂ ನಡೆಯುತ್ತಿತ್ತು.
ಮೋತಿ ಮಹಲ್‌ನಲ್ಲಿ ಬೃಹತ್‌ ಈಜುಕೊಳವಿದ್ದು, ನಗರದ ಅನೇಕ ಮಂದಿಗೆ ಈಜು ತರಬೇತಿ ನೀಡಿದ ಹಿರಿಮೆ ಇದಕ್ಕಿದೆ. ಅದೆಷ್ಟೋ ಮಂದಿ ತಾವು ಈಜು ಕಲಿತದ್ದಲ್ಲದೆ, ತಮ್ಮ ಮಕ್ಕಳಿಗೂ ಈಗ ಇದೇ ಈಜುಕೊಳದಲ್ಲಿ ತರಬೇತಿ ನೀಡುತ್ತಿದ್ದಾರೆ.

ಮಧುವನ್‌ ವೆಜ್‌ ರೆಸ್ಟೋರೆಂಟ್‌, ಮಂಗಳಾ ನಾನ್‌ವೆಜ್‌ ರೆಸ್ಟೋರೆಂಟ್‌ ಸೇರಿದಂತೆ ಬಾರ್‌-ರೆಸ್ಟೋರೆಂಟ್‌ಗಳಿವೆ. 100ಕ್ಕೂ ಅಧಿಕ ಮಂದಿ ಈ ಹೋಟೆಲ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮೋತಿಮಹಲ್‌ ಹೋಟೆಲ್‌ ಕಾರ್ಯನಿರ್ವಹಣೆಯನ್ನು ಸ್ಥಗಿತಗೊಳಿಸಿದ ಬಳಿಕ ಆಡಳಿತ ಮಂಡಳಿ ಎಲ್ಲ ಸಿಬ್ಬಂದಿಗೂ ತಮ್ಮದೇ ಬೇರೆ ಬೇರೆ ಸಂಸ್ಥೆಗಳಲ್ಲಿ ಉದ್ಯೋಗ ನೀಡುವ ಭರವಸೆ ನೀಡಿದೆ.
ಮೋತಿ ಮಹಲ್‌ ಹೋಟೆಲ್‌ನ ಲೀಸ್‌ ಅವಧಿ ಮುಗಿದಿರುವುದು ಕಾರ್ಯಾಚರಣೆ ನಿಲ್ಲಿಸಲು ಕಾರಣ. ಈ ಬಗ್ಗೆ ಅನೇಕ ರೀತಿಯಲ್ಲಿ ಮಾತುಕತೆ ನಡೆಸಿದ ಬಳಿಕ ಹೋಟೆಲ್‌ ವ್ಯವಹಾರವನ್ನು ಸ್ಥಗಿತಗೊಳಿಸಿ ಮೂಲ ಆಡಳಿತ ಮಂಡಳಿಗೆ ಬಿಟ್ಟು ಕೊಡುವುದು ಅನಿವಾರ್ಯವಾಗಿದೆ.

ಬೆಳೆಯುತ್ತಿರುವ ಮಂಗಳೂರು ನಗರಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ನಾನಾ ಕಡೆಗಳಿಂದ, ಹೊರಜಿಲ್ಲೆ, ರಾಜ್ಯಗಳಿಂದ ಪ್ರವಾಸಿಗರು ಬರುತ್ತಿದ್ದು, ಅವರಿಗೆಲ್ಲ ಮೋತಿ ಮಹಲ್‌ ದೊಡ್ಡ ಐಕಾನ್‌ ಆಗಿತ್ತು.

Related posts

Leave a Comment