ಉಡುಪಿ : ತಮ್ಮ ಮಗಳನ್ನು ಮುಸ್ಲಿಂ ಯುವಕನೊಬ್ಬ ಅಪಹರಿಸಿ ಮದುವೆಯಾಗುತ್ತಿದ್ದಾನೆ ಎಂದು ಕ್ರೈಸ್ತ ಸಮುದಾಯದ ತಂದೆಯೊಬ್ಬರು ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ ಘಟನೆ ಉಡುಪಿಯಲ್ಲಿ ನಡೆದಿದೆ. ಮುಸ್ಲಿಂ ಯುವಕ ನನ್ನ ಮಗಳನ್ನು ಅಪಹರಿಸಿದ್ದಾನೆ. ಇದು ಲವ್ ಜಿಹಾದ್ ಷಡ್ಯಂತ್ರವಾಗಿದೆ ಎಂದು ಅಪಹರಣಕ್ಕೆ ಒಳಗಾದ ಯುವತಿಯ ತಂದೆ ಆರೋಪಿಸಿದ್ದಾರೆ. ಪೊಲೀಸರ ವಶದಲ್ಲಿರುವ ಮಗಳನ್ನು ಒಂದು ಬಾರಿ ನಮ್ಮ ಮುಂದೆ ತಂದು ನಿಲ್ಲಿಸಿ ಎಂದು ಪೋಷಕರು ಬೇಡುತ್ತಿದ್ದಾರೆ.
ಉಡುಪಿಯ ಕೊಡವೂರಿನವರಾದ ಗಾಡ್ವಿನ್ ದೇವದಾಸ್ ಮತ್ತು ಮೇರುಸ್ ಪುಷ್ಪಲತಾ ಅವರ ಮಗಳು ಜೀನಾ ನಾಪತ್ತೆಯಾಗಿರುವ ಯುವತಿಯಾಗಿದ್ದಾಳೆ. ಉಡುಪಿಯ ಕರಂಬಳ್ಳಿಯ ನಿವಾಸಿ ಮಹಮ್ಮದ್ ಅಕ್ರಂ, ಜೀನಾಳನ್ನು ಅಪಹರಿಸಿದ್ದಾನೆ ಎಂದು ಪೊಲೀಸರಿಗೆ ದೂರಿದ್ದಾರೆ. ಮಾರ್ಚ್ 20ಕ್ಕೆ ಯುವತಿ ಕಾಲೇಜಿನಿಂದ ಮನೆಗೆ ವಾಪಸ್ ಸಾಗುತ್ತಿದ್ದಾಗ ಕುಟ್ಟಿಕಟ್ಟೆ ಎಂಬಲ್ಲಿ ಜೀನಾಳನ್ನು ಬಸ್ಸಿನಿಂದ ಇಳಿಸಿ ಹಾರಿಸಿಕೊಂಡು ಹೋಗಿದ್ದಾನೆ ಎಂದು ತಾಯಿ ದೂರಿದ್ದಾರೆ.
ಆದರೆ ಇತ್ತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಿದ್ದಂತೆ ಮೊಹಮ್ಮದ್ ಅಕ್ರಮ್ ಉಡುಪಿ ಉಪ ನೊಂದಾವಣಿ ಕಚೇರಿಯಲ್ಲಿ ವಿಶೇಷ ವಿವಾಹದಡಿ ಅರ್ಜಿ ಸಲ್ಲಿಸಿದ್ದಾರೆ. ಪೋಷಕರ ಪ್ರಕಾರ ಜೀನಾ 9ನೇ ತರಗತಿಯಲ್ಲಿರುವಾಗಲೇ ಅಕ್ರಂ ಇನ್ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದ. ಆ ಸಂದರ್ಭ ಆತನ ಮೇಲೆ ಚಿನ್ನದ ಸರ ಕಳ್ಳತನ, ಪೋಕ್ಸೋ ಕೇಸ್ ದಾಖಲಾಗಿತ್ತು. ಆ ನಂತರ ಆತ ನಿರಂತರ ಸಂಪರ್ಕದಲ್ಲಿದ್ದು, ಆ ಸೇಡನ್ನು ಈಗ ತೀರಿಸುತ್ತಿದ್ದಾನೆ ಎಂದು ಪೋಷಕರ ಆರೋಪ ಮಾಡಿದ್ದಾರೆ. ಇನ್ನೂ ಜೀನಾ ನಾಪತ್ತೆಯಾಗುವ ಮೊದಲು ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ಅಕ್ರಂ ಮತ್ತು ಝೀನಾ ಮದುವೆ ನೋಂದಣಿ ಮಾಡಿಕೊಂಡಿದ್ದರು. ಈ ವಿಚಾರ ಪೋಷಕರಿಗೆ ಮರುದಿನ ಗೊತ್ತಾಗಿದೆ. ಇದು ತಿಳಿಯುತ್ತಿದ್ದಂತೆ, ಯುವತಿಯನ್ನು ಅಕ್ರಂ ಅಪಹರಿಸಿದ್ದಾನೆ ಎಂದು ಪೋಷಕರು ದೂರಿದ್ದಾರೆ. ಆದರೆ ಪೊಲೀಸರು ಇಬ್ಬರು ವಯಸ್ಕರು, ಏನೂ ಮಾಡೋಕ್ಕಾಗಲ್ಲ ಎಂದು ಕೈ ತೊಳೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಪೋಷಕರು ಒಮ್ಮೆ ನಮ್ಮ ಮಗಳನ್ನು ತಂದು ನಮ್ಮ ಮುಂದೆ ನಿಲ್ಲಿಸಿ. ಆರೋಪಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾನೆ. ಆತನನ್ನು ಕೊಡಲೇ ಬಂಧಿಸಿ. ಮೊಹಮ್ಮದ್ ಅಕ್ರಂ ಗರುಡ ಗ್ಯಾಂಗ್ನ ಸದಸ್ಯ ಎಂಬ ಮಾಹಿತಿ ಇದೆ. ಪೊಲೀಸರ ಬಳಿ ಹೋದರೆ, ಇಬ್ಬರೂ ವಯಸ್ಕರು, ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎನ್ನುತ್ತಾರೆ. ಇಬ್ಬರು ಜೊತೆಗೆ ಸುರಕ್ಷಿತವಾಗಿದ್ದಾರೆ ಎಂದು ವಿಡಿಯೋ ತೋರಿಸಿ ಪೊಲೀಸರು ನಮ್ಮನ್ನು ವಾಪಸ್ ಕಳುಹಿಸಿದ್ದಾರೆ. ಉಡುಪಿ ಎಸ್‌ಪಿ ಡಾ. ಅರುಣ್ ಕುಮಾರ್ ಯಾವ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿದ್ದಾರೆ. ನಮ್ಮ ಮಗಳು ಮರ್ಯಾದೆಗೆ ಅಂಜಿದ್ದಾಳೆ. ಯುವಕನನ್ನು ವಿಚಾರಣೆಗೆ ಒಳಪಡಿಸಬೇಕು, ಇದರ ಹಿಂದಿರುವ ಜಾಲವನ್ನು ಪತ್ತೆಹಚ್ಚಬೇಕು ಎಂದು ಕುಟುಂಬಸ್ಥರು ಗೃಹ ಸಚಿವರನ್ನು ಒತ್ತಾಯಿಸಿದ್ದಾರೆ.