ಬಜಪೆ : ನೆಲ್ಲಿದಡಿ ಗುತ್ತು ಕಾಂತೇರಿ ಜುಮಾದಿ ಬಂಟ ದೈವಸ್ಥಾನವನ್ನು ಸ್ಥಳದಲ್ಲೇ ಉಳಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಹೋರಾಟದ ಅಂಗವಾಗಿ ನಿನ್ನೆ ಆದಿತ್ಯವಾರ ನೆಲ್ಲಿದಡಿ ಗುತ್ತುವಿನಲ್ಲಿ ಕೇಮಾರು ಸಾಂದೀಪನೆ ಆಶ್ರಮದ ಸ್ವಾಮೀಜಿಗಳಾದ ಶ್ರೀ ಶ್ರೀ ಶ್ರೀ ಈಶ ವಿಠ್ಠಲ ದಾಸ ಸ್ವಾಮೀಜಿಯವರ ಮುಂದಾಳತ್ವದಲ್ಲಿ, ನೆಲ್ಲಿದಡಿ ಗುತ್ತುವಿನ ಗಡಿ ಪ್ರಧಾನರಾದ ಲಕ್ಷ್ಮಣ ಚೌಟ ಅವರ ಉಪಸ್ಥಿತಿಯಲ್ಲಿ ಮತ್ತು ಹಲವು ಗಣ್ಯರು ಹಾಗೂ ಊರಿನವರು ಸೇರಿಕೊಂಡು ವಿಶೇಷ ಪೂಜೆ ಮತ್ತು ಸಾಮೂಹಿಕ ಪ್ರಾರ್ಥನೆ ನಡೆಸಿದರು.
ಕೆಲವು ದಿನಗಳ ಹಿಂದೆ ಎಂ.ಎಸ್.ಈ.ಜೆಡ್. ಸಂಸ್ಥೆ ದೈವಸ್ಥಾನಕ್ಕೆ ಪೂಜೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ ಎಂಬ ವಿಚಾರವಾಗಿ ಹಲವಾರು ಪೋಸ್ಟ್ ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ನಂತರದ ದಿನಗಳಲ್ಲಿ ಬಜಪೆಯಿಂದ ನೆಲ್ಲಿದಡಿ ಗುತ್ತುವಿಗೆ ಪಾದಯಾತ್ರೆ ನಡೆಸುವ ಮೂಲಕ ಪ್ರತಿಭಟನೆ ನಡೆಸುವುದಾಗಿ ನೆಲ್ಲಿದಡಿ ಗುತ್ತು ರಕ್ಷಣಾ ಸಮಿತಿ ಕರೆ ಕೊಟ್ಟಿತ್ತು. ಆಯಾ ನಂತರ ಜಿಲ್ಲಾಧಿಕಾರಿ ಬಳಿ ಮಾನ್ಯ ಸಂಸದರು, ಶಾಸಕರು ಸಮಾಲೋಚನೆ ನಡೆಸಿ ಹೊಸದಾಗಿ ರಸ್ತೆ ನಿರ್ಮಿಸುವ ಬಗ್ಗೆ ರೂಪುರೇಷೆ ನಿರ್ಮಿಸಿದ್ದಾರೆ ಎಂದು ಶ್ರೀಕಾಂತ್ ಶೆಟ್ಟಿ ಕಾರ್ಕಳ ತಿಳಿಸಿದರು. ಆದ್ದರಿಂದ, ಅಧಿಕಾರಿಗಳು ಈಗಾಗಲೇ ಬೇರೆಯೇ ರಸ್ತೆಯನ್ನು ನಿರ್ಮಿಸಿ ಕೊಡುವ ಭರವಸೆ ನೀಡಿದ್ದರಿಂದ, ಆದಷ್ಟು ಬೇಗ ರಸ್ತೆ ಕಾಮಗಾರಿ ನಡೆಯಲಿ ಎಂದು ದೈವದ ಮುಂದೆ ಪ್ರಾರ್ಥಿಸಿದರು.
ನೆಲ್ಲಿದಡಿ ಗುತ್ತು ಮನೆಯ ಚಾವಡಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅದ್ಯಪಾಡಿ ಆದಿನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಸುಜಿತ್ ಆಳ್ವ, ಹಿಂದೂ ವಾಗ್ಮಿ ಮತ್ತು ನೆಲ್ಲಿದಡಿ ಗುತ್ತು ರಕ್ಷಣಾ ಸಮಿತಿಯ ಪ್ರಮುಖರಾದ ಶ್ರೀಕಾಂತ್ ಶೆಟ್ಟಿ ಕಾರ್ಕಳ, ಮಂಜಣ್ಣ ಸೇವಾ ಬ್ರಿಗೇಡ್ ನ ಸ್ಥಾಪಕಾಧ್ಯಕ್ಷರಾದ ಮನೋಜ್ ಕೋಡಿಕೆರೆ, ಮನೋಹರ್ ಶೆಟ್ಟಿ ತೋನ್ಸೆ, ನ್ಯಾಯವಾದಿಗಳಾದ ಶೈಲೇಶ್ ಚೌಟ ಮತ್ತು ಹಲವು ಗಣ್ಯರ ಜೊತೆ ಹಾಗೂ ವಿವಿಧ ತುಳು ಸಂಘಟನೆ ಮುಖಂಡರು, ನೆಲ್ಲಿದಡಿ ಗುತ್ತು ಕುಟುಂಬಸ್ಥರು ಮತ್ತು ಊರಿನ ಜನರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
